ಕುಕ್ಕೆ ವ್ಯವಸ್ಥಾಪನಾ ಸಮಿತಿ: ಒಂದು ಸದಸ್ಯತ್ವ ಮಲೆಕುಡಿಯರಿಗೆ ಮೀಸಲಿಗೆ ಒತ್ತಾಯ

ಕುಕ್ಕೆ ವ್ಯವಸ್ಥಾಪನಾ ಸಮಿತಿ: ಒಂದು ಸದಸ್ಯತ್ವ ಮಲೆಕುಡಿಯರಿಗೆ ಮೀಸಲಿಗೆ ಒತ್ತಾಯ

ಮಂಗಳೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಕನಿಷ್ಠ ಒಂದು ಸದಸ್ಯತ್ವವನ್ನು ಮಲೆಕುಡಿಯ ಸಮುದಾಯದವರಿಗೆ ಮೀಸಲಿರಿಸಿ, ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ರಾಜ್ಯ ಮಲೆಕುಡಿಯ ಸಂಘ ಒತ್ತಾಯಿಸಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇಲ್ಲಿನ ಮೂಲ ನಿವಾಸಿಗಳಾದ ಮಲೆಕುಡಿಯ ಸಮುದಾಯಕ್ಕೆ ಸೇರಿರುವ ದೇವಸ್ಥಾನವೆಂಬ ಹಿನ್ನೆಲೆಯನ್ನು ಹೊಂದಿದೆ. ಮಲೆಕುಡಿಯ ಸಮುದಾಯದ ಕುಕ್ಕೆ ಮತ್ತು ಲಿಂಗ ಎನ್ನುವ ಹೆಸರಿನ ಇಬ್ಬರು ವ್ಯಕ್ತಿಗಳು ಕ್ಷೇತ್ರ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ. ಕಾಲಾಂತರದಲ್ಲಿ ದೇವಸ್ಥಾನ ಸರಕಾರದ ಆಡಳಿತಕ್ಕೆ ಒಳಪಟ್ಟು ಮುನ್ನಡೆಯುತ್ತಿದೆ. ಇದೀಗ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸುವ ಬಗ್ಗೆ ಹಿಂದು ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಅರ್ಜಿ ಆಹ್ವಾನಿಸಿದೆ. ಈ ಬಾರಿಯ ವ್ಯವಸ್ಥಪನಾ ಸಮಿತಿಯಲ್ಲಿ ಒಂದು ಸ್ಥಾನವನ್ನು ಮಲೆಕುಡಿಯರಿಗೆ ಮೀಸಲಿಡಬೇಕು, ಈ ಬಗ್ಗೆ ಸಂಬಂಧಿಸಿದ ಅಧಿಸೂಚನೆಯಲ್ಲಿ ಉಲ್ಲೇಖಿಸಬೇಕು ಎಂದು ರಾಜ್ಯ ಮಲೆಕುಡಿಯ ಸಂಘ ಕರ್ನಾಟಕ ಅಧ್ಯಕ್ಷ ಶ್ರೀಧರ್ ಗೌಡ ಈದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಮಲೆಕುಡಿಯ ಸಮುದಾಯಕ್ಕೂ ಅವಿನಾಭಾವ ನಂಟು ಇದೆ. ದೇವಸ್ಥಾನದ ಪೂಜಾ ಕೈಂಕರ್ಯಗಳು ನೆರವೇರುವಲ್ಲಿ ಮಲೆಕುಡಿಯರ ಪಾತ್ರ ಮಹತ್ವದ್ದಾಗಿದೆ. ದೇವರ ಪರಿಚಾರಕ ವೃತ್ತಿಯಿಂದ ಹಿಡಿದು ಉತ್ಸವ ಕಾರ್ಯಗಳು ಸಾಂಗವಾಗಿ ನೆರವೇರಲು ಮಲೆಕುಡಿಯರು ಶ್ರಮಪಡುತ್ತಾರೆ. ವಾರ್ಷಿಕ ಜಾತ್ರೆಯ ಬ್ರಹ್ಮರಥ ಕಟ್ಟುವ ಕಾರ್ಯವನ್ನು ಮಲೆಕುಡಿಯರೇ ನಿರ್ವಹಿಸುತ್ತಾರೆ. ಈ ಹಿಂದಿನ ವ್ಯವಸ್ಥಾಪನಾ ಸಮಿತಿಯಲ್ಲಿ ಕನಿಷ್ಠ ಒಂದು ಸ್ಥಾನವನ್ನು ಮಲೆಕುಡಿಯರಿಗೆ ಮೀಸಲಿಡುವ ಜತೆಗೆ ಕಾಯ್ದಿರಿಸಲಾಗಿತ್ತು. ಮುಂದಿನ ಸಮಿತಿಯಲ್ಲೂ ಮಲೆಕುಡಿಯರಿಗೆ ಸ್ಥಾನ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುವುದು. ನಮ್ಮ ಸಮುದಾಯದಿಂದ ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಸಲ್ಲಿಸಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷೆ ವಸಂತಿ ನೆಲ್ಲಿಕಾರು, ಜತೆ ಕಾರ್ಯದರ್ಶಿ ಜಯರಾಮ್ ಆಲಂಗಾರು, ಸಂಘಟನಾ ಕಾರ್ಯದರ್ಶಿ ನೋಣಯ್ಯ ರೆಂಜಾಳ, ದ.ಕ. ಜಿಲ್ಲಾಧ್ಯಕ್ಷ ಹರೀಶ್ ಎಳನೀರು, ಉಡುಪಿ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article