ನಗರದಲ್ಲಿ ಸಹಕಾರಿ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮ: ಗ್ರಾಮೀಣ ಜನರ ಬದುಕಿಗೆ ಶಕ್ತಿ ತುಂಬಲು ಸಾಲ ಮೇಳ ನಡೆಸಲು ಯು.ಟಿ. ಖಾದರ್ ಸೂಚನೆ

ನಗರದಲ್ಲಿ ಸಹಕಾರಿ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮ: ಗ್ರಾಮೀಣ ಜನರ ಬದುಕಿಗೆ ಶಕ್ತಿ ತುಂಬಲು ಸಾಲ ಮೇಳ ನಡೆಸಲು ಯು.ಟಿ. ಖಾದರ್ ಸೂಚನೆ


ಮಂಗಳೂರು: ಗ್ರಾಮೀಣ ಜನತೆಯ ಬದುಕಿಗೆ ಇನ್ನಷ್ಟು ಶಕ್ತಿ ನೀಡುವ ಸಲುವಾಗಿ ಇನ್ನೊಂದು ಸಾಲ ಮೇಳ ಆಯೋಜನೆ ಮಾಡುವಂತೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ.

ನಗರದ ಕರಾವಳಿ ಮೈದಾನದಲ್ಲಿ ಶನಿವಾರ 71ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿ ಬಳಿಕ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿಯವರ ಸಾಲ ಮೇಳದಿಂದ ಜನಸಾಮಾನ್ಯರು ಬ್ಯಾಂಕ್ ಬಾಗಿಲು ನೋಡುವಂತಾಯಿತು. ಗ್ರಾಮೀಣ ಜನರ ಬದುಕಿಗೆ ಇನ್ನಷ್ಟು ಶಕ್ತಿ ನೀಡುವ ಸಲುವಾಗಿ ಇನ್ನೊಮ್ಮೆ ಸಾಲ ಮೇಳ ಹಮ್ಮಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಂದ ಜನರು ಸ್ವಾಭಿಮಾನಿಗಳಾಗಲಿ ಎಂದು ಅವರು ಅಭಿಪ್ರಾಯಪಟ್ಟರು.

ಹೈನುಗಾರರಿಗೆ ಪ್ರೋತ್ಸಾಹಧನದ ಮೊತ್ತವನ್ನು 2 ರೂ.ಗೆ ಹೆಚ್ಚಳ ಮಾಡಬೇಕು, ಸಹಕಾರಿ ಸಂಘಗಳ ನೌಕರರಿಗೂ ಪ್ರೋತ್ಸಾಹಧನವನ್ನು ಏರಿಕೆ ಮಾಡಬೇಕು ಎಂದು ಸ್ಪೀಕರ್ ಖಾದರ್ ಅವರು ಸಚಿವರನ್ನು ವಿನಂತಿಸಿದರು.

ಸಹಕಾರ ವಾರ ಪತ್ರಿಕೆ ಅನಾವರಣಗೊಳಿಸಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಆಂದೋಲನದಲ್ಲಿ ತೊಡಗಿಸಿಕೊಳ್ಳಬೇಕು. ಸಹಕಾರ ರಂಗದಲ್ಲಿ ಕೇಂದ್ರ ಸರ್ಕಾರದ ಕೊಡುಗೆಯನ್ನು ಸ್ಮರಿಸಿದ ಅವರು, ಸಹಕಾರ ಆಂದೋಲನ ಜನರ ಆಂದೋಲನ ಆಗಬೇಕು. ಸಾಲ ಪಡೆದು ಕ್ಲಪ್ತ ಸಮಯದಲ್ಲಿ ಮರು ಪಾವತಿಸುವ ದ.ಕ. ಜಿಲ್ಲೆಯ ಸಹಕಾರಿಗಳ ಬಗ್ಗೆ ಅಭಿಮಾನವಿದೆ ಎಂದರು.

ಬದಲಾವಣೆ..:

ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ವಾತಂತ್ರ್ಯದ ಬಳಿಕ ಪಂಚವಾರ್ಷಿಕ ಯೋಜನೆಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಬಲವನ್ನು ತುಂಬುವ ಕೆಲಸ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಸಹಕಾರಿ ಕ್ಷೇತ್ರದಲ್ಲಿ ಬಹಳಷ್ಟು ಕ್ರಾಂತಿಕಾರಿ ಬದಲಾವಣೆಯಾಗಿದೆ ಎಂದರು.

ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಸಹಕಾರಿ ಕ್ಷೇತ್ರ ಸಮಾಜದ ತಳಮಟ್ಟದಲ್ಲಿ ಬದಲಾವಣೆ ತಂದಿದೆ. ದ.ಕ.ದಲ್ಲಿ ಸಹಕಾರಿ ಸೇರಿದಂತೆ ಎಲ್ಲ ಕ್ಷೇತ್ರಗಳೂ ದೇಶಕ್ಕೇ ಮಾದರಿಯಾಗಿದೆ. ಸಹಕಾರಿ ರಂಗದ ಧುರೀಣ ಡಾ.ಎಂ.ಎನ್.ಆರ್. ಅವರ ಕಾರ್ಯವೈಖರಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಸಹಕಾರಿ ರಂಗದ ಚಟುವಟಿಕೆಗೆ ಆತ್ಮನಿರ್ಭರತೆಗೆ ಪೂರಕವಾಗಿದೆ ಎಂದರು.

ಉತ್ತಮ ಸ್ವಸಹಾಯ ಸಂಘಗಳಿಗೆ ಪುರಸ್ಕಾರ ನೆರವೇರಿಸಿ ಮಾತನಾಡಿದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ. ದೇವೇಗೌಡ, ಕೇಂದ್ರ ಸರ್ಕಾರದ ನಬಾರ್ಡ್

ಕಳೆದ ಬಾರಿ 5,640 ಕೋಟಿ ರೂ. ಸಾಲ ನೀಡಿದ್ದರೆ, ಈ ಬಾರಿ ಕೇವಲ 2,140 ಕೋಟಿ ರು. ರೈತ ಸಾಲ ನೀಡಿದೆ. ಹೀಗಾದಲ್ಲಿ ರೈತರು ಎಲ್ಲಿಗೆ ಹೋಗಬೇಕು? ಕೃಷಿ ಕತೆ ಏನು? ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಶತಮಾನೋತ್ಸವ ಪೂರೈಸಿದ ಸಹಕಾರ ಸಂಘಗಳಿಗೆ ಪುರಸ್ಕಾರ ನೀಡಿದ ಮಾಜಿ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಪೂರ್ಣ ಸಹಕಾರ ನೀಡುತ್ತಿದೆ ಎಂದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ.ಭರತ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಕೋಡಿಕಲ್,

ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಬೆಂಗಳೂರಿನ ಸಹಕಾರಿ ಸಂಘಗಳ ಅಪರ ನಿಬಂಧಕ ಕೆ.ಎಸ್.ನವೀನ್, ಮೈಸೂರು ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ, ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್, ಉಡುಪಿ ಜಿಲ್ಲೆಯ ಉಪ ನಿಬಂಧಕಿ ಲಾವಣ್ಯ, ಎಸ್ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರು, ಸಿಇಒ ಗೋಪಾಲಕೃಷ್ಣ ಭಟ್ ಮತ್ತಿತರರಿದ್ದರು.

ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ವಂದಿಸಿದರು.

ಸಹಕಾರ ಮಾಣಿಕ್ಯ ಪ್ರಶಸ್ತಿ ಪ್ರದಾನ..:

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸಿ ‘ಸಹಕಾರ ಮಾಣಿಕ್ಯ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಜೊತೆಗೆ 5 ಗ್ರಾಂ. ಚಿನ್ನದ ಪದಕ, 10,000 ರೂ. ನಗದು ಹಾಗೂ ಪಾರಿತೋಷಕ ನೀಡಲಾಯಿತು. ಸಾಮಾನ್ಯ ವಿಭಾಗದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಪೈಕಿ ಉಭಯ ಜಿಲ್ಲೆಗಳಲ್ಲಿ ಒಂದರಂತೆ ಹಾಗೂ ಹೈನುಗಾರಿಕೆ, ಕ್ರೆಡಿಟ್ ಸೊಸೈಟಿ, ಮೀನುಗಾರ ಸಹಕಾರ ಸಂಘ, ಸೌಹಾರ್ದ ಸಹಕಾರಿ ಸಂಘ ಹಾಗೂ ಮಹಿಳಾ ಸಹಕಾರಿ ಸಂಘಕ್ಕೆ ಉಭಯ ಜಿಲ್ಲೆಗಳಿಂದ ಒಂದು  ಹಾಗೂ 2013-24ನೇ ಸಾಲಿನಲ್ಲಿ ಶತಮಾನೋತ್ಸವ ಪೂರೈಸಿದ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗೌರವಿಸಲಾಯಿತು.

ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಹೊರತಂದ ನಂದಿನಿ ಪ್ರೀಮಿಯಂ ಮೊಸರು ಪ್ಯಾಕೆಟ್ನ್ನು ವಿಶೇಷ ರೀತಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ನವೋದಯ ಚಾರಿತ್ರಿಕ ಕಾರ್ಯಕ್ರಮ..:

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರಿ ಕ್ಷೇತ್ರ ಮಹಿಳೆಯರ ಅಭೂತಪೂರ್ವ ಬೆಂಬಲ ಹಾಗೂ ಸಹಕಾರದಿಂದ ನಡೆಯುತ್ತಿದೆ. ಹಳ್ಳಿ ಹಳ್ಳಿಗಳಲ್ಲೂ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಇವರೆಲ್ಲರ ಶ್ರಮದಿಂದ ಸಹಕಾರಿ ಕ್ಷೇತ್ರ ಶ್ರೀಮಂತವಾಗಿದೆ.ಮುಂದೆ ಇನ್ನಷ್ಟು ಸಂಭ್ರಮ ಸಡಗರದಿಂದ ಸಪ್ತಾಹ ಆಚರಣೆಯಾಗಬೇಕು ಎಂದರು.

ಮುಂದಿನ ಫೆಬ್ರವರಿ 24ರಂದು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆಯಾಗಿ 25 ವರ್ಷ ಪೂರ್ಣಗೊಳ್ಳುತ್ತದೆ. ಇದನ್ನು ಚಾರಿತ್ರಿಕ ಕಾರ್ಯಕ್ರಮವಾಗಿ ರೂಪಿಸಲು ರಾಷ್ಟ್ರಮಟ್ಟದಲ್ಲಿ ಹೆಸರು ಉಳಿಯುವಂತೆ ಮಾಡಲು ಎಲ್ಲರೂ ಶ್ರಮಪಡಬೇಕು. ಟ್ರಸ್ಟ್‌ಗೆ ಯಾವುದೇ ದೇಣಿಗೆ ಪಡೆಯದೆ, ಗ್ರಾಹಕರಿಗೆ ಚಕ್ರಬಡ್ಡಿಯನ್ನೂ ವಿಧಿಸುತ್ತಿಲ್ಲ, ಆರನೇ ಬಾರಿಗೆ ಸಮವಸ್ತ್ರ ವಿತರಿಸಲಾಗುತ್ತಿದೆ ಎಂದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article