
ರಾಜ್ಯದಲ್ಲಿ ಬಡ ಕುಟುಂಬದ ಮೇಲೆ ಕಾಂಗ್ರೆಸ್ ಸರ್ಕಾರದಿಂದ ನಿರಂತರ ಪ್ರಹಾರ: ಸತೀಶ್ ಕುಂಪಲ
ಮಂಗಳೂರು: ಮಹಾರಾಷ್ಟ್ರದ ಚುನಾವಣಾ ಪ್ರಚಾರ ಸಭೆಗಳಿಗೆ ಹೋಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಭರ್ಜರಿ ಭಾಷಣ ಬಿಗಿದ ಸಿದ್ದರಾಮಯ್ಯ ಕರ್ನಾಟಕದಲ್ಲಿ ಗ್ಯಾರಂಟಿಗೆ ಹಣ ಹೊಂದಿಸಲು ಸಾಧ್ಯವಾಗದೆ ಹೈರಾಣಾಗಿ ಬಡಜನತೆಯ ಪಡಿತರ ಕಾರ್ಡ್ ಮೇಲೆ ತನ್ನ ವಕ್ರದೃಷ್ಟಿ ಬೀರಿದ್ದಾರೆ.
ಅನರ್ಹತೆಯ ಮಾನದಂಡವೆಂಬ ಅಸ್ತ್ರವನ್ನು ಪ್ರಯೋಗಿಸಿ ರಾಜ್ಯದಲ್ಲಿ ಸುಮಾರು 14 ಲಕ್ಷಕ್ಕೂ ಅಧಿಕ ಬಿ.ಪಿ.ಎಲ್. ಕಾರ್ಡ್‌ನ್ನು ರದ್ದು ಪಡಿಸುವ ಆದೇಶವನ್ನು ಹೊರಡಿಸಿದೆ. ಈಗಾಗಲೇ 3.5 ಲಕ್ಷ ಬಿ.ಪಿ.ಎಲ್. ಕಾರ್ಡ್‌ಗಳು ಎ.ಪಿ.ಎಲ್. ಆಗಿ ಪರಿವರ್ತನೆಯಾಗಿದೆ. ಇದು ನಿರಂತರವಾಗಿ ಬೆಲೆಯೇರಿಕೆಯಿಂದ ಕಂಗಾಲಾಗಿರುವ ಬಡಜನತೆಯ ಮೇಲೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಪ್ರಹಾರ. ಈ ಸರ್ಕಾರಕ್ಕೆ ಜನರ ಮೇಲೆ ನೈಜ ಕಾಳಜಿಯಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲೂ ಲಕ್ಷಾಂತರ ಬಿ.ಪಿ.ಎಲ್ ಕಾರ್ಡ್‌ಗಳು ರದ್ದಾಗುವ ಆತಂಕವಿದೆ. ಸಿದ್ದರಾಮಯ್ಯರು ಯಾವುದೇ ಕಾರಣಕ್ಕೂ ಬಿ.ಪಿ.ಎಲ್. ಕಾರ್ಡ್ ದಾರರಿಗೆ ಅನ್ಯಾಯ ಎಸಗಿದರೆ ಬಿ.ಜೆ.ಪಿ. ಬೀದಿಗಿಳಿದು ಹೋರಾಡಿ ನ್ಯಾಯ ಒದಗಿಸಲು ಕಟಿಬದ್ದವಾಗಿದೆ ಎಂದು ಎಚ್ಚರಿಕೆಯ ಸಂದೇಶವನ್ನು ಕುಂಪಲ ನೀಡಿದರು.