
"ಕಾನೂನು ಸೌಲಭ್ಯಗಳ ಬಗ್ಗೆ ಜನಸಾಮಾನ್ಯರು ತಿಳಿದಿರಬೇಕು": ಶೋಭಾ ಬಿ.ಜಿ.
ಮಂಗಳೂರು: ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತವಾಗಿ ನೀಡಲಾಗುವ ಹಲವಾರು ಕಾನೂನು ಸೌಲಭ್ಯಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿದಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ. ಜಿ. ಹೇಳಿದರು.
ಅವರು ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆ, ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲೆಯ ಉದ್ಯೋಗದಾತರಿಗೆ, ಗುತ್ತಿಗೆದಾರರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಅನುಷ್ಠಾಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಜಿಲ್ಲ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನೆರದ ಜಿಲ್ಲಾ ಮಟ್ಟದ ಕಾರ್ಯಾಗಾರ ವನ್ನು ಉದ್ಘಾಟಿಸಿ ಮಾತನಾಡಿದರು
ಪ್ರತಿಯೊಬ್ಬ ಜನಸಾಮಾನ್ಯರಿಗೂ ಕಾನೂನಿನ ಬಗ್ಗೆ ಅರಿವಿರಬೇಕು. ಯಾವುದೇ ಸಮಸ್ಯೆಗಳು ಉಂಟಾದರೆ ಕಾನೂನಿನ ಮೂಲಕ ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನು ಅರಿತಿರಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ ಮಾತನಾಡಿ ಕಾನೂನಿನ ಬಗ್ಗೆ ಕಾಯಿದೆಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿರಬೇಕು. ಯಾವುದೇ ಒಂದು ದಂಡ ವಿಧಿಸಿದ್ದಾಗ ಅದರ ಬಗ್ಗೆ ಮಾಹಿತಿ ಇರಬೇಕು ದಂಡ ವಿಧಿಸುವಾಗ ಯಾವುದೇ ತೊಂದರೆಗಳಾಗಬಾರದು. ಅದಕ್ಕಾಗಿ ಮೊದಲೇ ಅದರ ಬಗ್ಗೆ ತಿಳಿದುಕೊಂಡಿರಬೇಕು. ಕಾರ್ಮಿಕರಿಗೆ, ಡ್ರೈವರ್ಗಳಿಗೆ ಅವರ ಮಕ್ಕಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಇರಬೇಕು. ಮಾಲಿಕರಿಗೆ ಕಾಯ್ದೆಗಳ ಬಗ್ಗೆ ಅರಿವಿರಬೇಕು. ಕಾರ್ಮಿಕರ ಕಾಯಿದೆಗಳನ್ನು ಮಾಲೀಕನಾದವನು ತಿಳಿದುಕೊಳ್ಳದಿರುವುದು ಅಪರಾಧವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ ಮಾತನಾಡಿ, ಈ ಕಾರ್ಯಗಾರದ ಮುಖ್ಯ ಉದ್ದೇಶವೇ ಕಾರ್ಮಿಕರಿಗೆ ಇಲಾಖೆಯಿಂದ ಹಾಗೂ ಕಾನೂನಿನ ಮೂಲಕ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸುವುದಾಗಿದೆ. ಯಾವುದೇ ಕ್ರಮ ಜರುಗಿಸುವ ಮೊದಲು ಅದರ ಬಗ್ಗೆ ಮಾಹಿತಿ ಮೊದಲೇ ಮಾಹಿತಿ ಇರಬೇಕು. ಕಾಯಿದೆಗಳನ್ನು ಅನುಷ್ಠಾನ ಮಾಡುವ ಬಗ್ಗೆ ಹಾಗೂ ಕಾರ್ಮಿಕರ ಮತ್ತು ಮಾಲೀಕರ ನಡುವೆ ಇರುವ ಸಮಸ್ಯೆಗಳು ಗೊಂದಲಗಳನ್ನು ನಿವಾರಿಸುವ ಉದ್ದೇಶದಿಂದ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಪ್ರಾದೇಶಿಕ ಆಯುಕ್ತ ಎ. ಪಿ. ಉನ್ನಿಕೃಷ್ಣನ್, ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷಣೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಖಾನೆಗಳ ಉಪ ನಿರ್ದೇಶಕ ಎಂ. ಎಸ್. ಮಹಾದೇವ್, ಕಾರ್ಮಿಕರ ರಾಜ್ಯ ವಿಮಾ ಯೋಜನೆ ಮತ್ತು ವೈದ್ಯಕೀಯ ಸೇವೆ, ಉಪ ಕೇಂದ್ರೀಯ ಕಾಯಾಲಯ ಉಪ ನಿರ್ದೇಶಕ ಗುರುವಿಂದರ್ ಸಿಂಗ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪ ನಿರ್ದೇಶಕ ಎ. ಉಸ್ಮಾನ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಡಾ. ಬಿ. ಎಸ್. ಹೇಮಲತ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಮನೀಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.