ವ್ಯಕ್ತಿಗಿಂತ ಮೌಲ್ಯ ಮುಖ್ಯವಾಗಬೇಕು: ಸುಧೀರ್ ಕುಮಾರ್ ಮುರೊಳಿ

ವ್ಯಕ್ತಿಗಿಂತ ಮೌಲ್ಯ ಮುಖ್ಯವಾಗಬೇಕು: ಸುಧೀರ್ ಕುಮಾರ್ ಮುರೊಳಿ


ಮಂಗಳೂರು: ವ್ಯಕ್ತಿಯು ಹುಟ್ಟಿನಿಂದ ಶ್ರೇಷ್ಠನಾಗುವುದಿಲ್ಲ, ಬದಲಾಗಿ ಕರ್ಮದಿಂದ ಶ್ರೇಷ್ಠನಾಗುತ್ತಾನೆ ಎಂದು ಪ್ರತಿಪಾದಿಸಿದ ಪ್ರವಾದಿಯವರು ವ್ಯಕ್ತಿ ನಿರಪೇಕ್ಷಿತ ಸಮಾಜವನ್ನು ಬೆಳೆಸಿದರು. ನಾವು ಇಸ್ಲಾಮನ್ನು ಅರಿಯಬೇಕಾದುದು ರಾಜಕೀಯದಿಂದಲ್ಲ, ಬದಲಾಗಿ ಇಸ್ಲಾಮಿನ ಸಂದೇಶಗಳಿಂದ ಎಂಬುದನ್ನು ಜನರಿಗೆ ನಾವು ತಿಳಿಸಬೇಕಾದ ಅಗತ್ಯವಿದೆ ಎಂದು ಖ್ಯಾತ ನ್ಯಾಯವಾದಿ ಮತ್ತು ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ್ ಮುರೋಳಿ ಹೇಳಿದರು.

ಅವರು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಶಾಖೆಯು ‘ಪ್ರವಾದಿ ಮುಹಮ್ಮದ್(ಸ) ಪರಿಚಯಿಸಿದ ಆದರ್ಶ ಸಮಾಜ ಮತ್ತು ಇಂದಿನ ಸವಾಲುಗಳು’ ಎಂಬ ವಿಷಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಿದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಬಹಳ ಮುಂದುವರಿದ ರಾಷ್ಟವೆನಿಸಿದ ಅಮೇರಿಕಕ್ಕೆ ಕರಿವರ್ಣೀಯ ಸ್ತ್ರೀಯನ್ನು ಅಧ್ಯಕ್ಷೆಯನ್ನಾಗಿ ಮಾಡಲಾಗದುದಕ್ಕೆ ವರ್ಣ ಪಕ್ಷಪಾತ ಕಾರಣವಾಗಿದೆ. ಅದೇ ವೇಳೆ ಕರಿಯ, ಬಿಳಿಯ ಭೇದವಿಲ್ಲದೆ ಎಲ್ಲರೂ ಸಮಾನರೆಂದು ಕಲಿಸಿದ ಪ್ರವಾದಿಯವರು ವಿಶ್ವ ಮಾನವ ವಿಚಾರಧಾರೆಯನ್ನು ಕಲಿಸಿದರು. ಮದ್ಯ ವಿರೋಧಿ ಹೋರಾಟಕ್ಕೆ ಗಾಂಧೀಜಿಯವರಿಗೆ ಪ್ರೇರಣೆಯಾದದ್ದೂ ಪ್ರವಾದಿಯವರ ಸಂದೇಶವಾಗಿತ್ತು. ವ್ಯಕ್ತಿಗಿಂತ ಮೌಲ್ಯ ಮುಖ್ಯ ಎಂದು ಕಲಿಸಿದ ಬಸವಣ್ಣ ಮತ್ತು ಪ್ರವಾದಿಯವರ ಆದರ್ಶವನ್ನು ನಾವು ಪಾಲಿಸಬೇಕಾಗಿದೆ ಎಂದರು.

ವಾರ್ತಾ ಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ, ಪ್ರವಾದಿಯವರು ಕೇವಲ ಬೋಧಕರಾಗಿರಲಿಲ್ಲ. ನುಡಿದಂತೆ ನಡೆದು ತೋರಿಸಿದ ಅವರು ನಿರ್ಮಲ ಚಾರಿತ್ರ್ಯದ ವ್ಯಕ್ತಿತ್ವವನ್ನು ಬೆಳೆಸಿದರು. ಸತ್ಯ, ನ್ಯಾಯ, ಸಮಾನತೆ ತುಂಬಿದ ಸಮಾಜ ನಿರ್ಮಿಸಿದರು. ದೇವನಿಗೆ ಹತ್ತಿರವಾಗಲು ಮನುಷ್ಯ ಸನ್ಯಾಸವನ್ನು ಸ್ವೀಕರಿಸಬೇಕಿಲ್ಲ ಬದಲಾಗಿ ಸಾಂಸಾರಿಕರಾಗಿ, ವ್ಯಾಪಾರಿಗಳಾಗಿ ಆಧ್ಯಾತ್ಮಿಕತೆಯನ್ನು ಬೆಳೆಸಬಹುದಾಗಿದೆ ಎಂದು ಹೇಳಿದರು.

ಮತ್ತೋರ್ವ ಅತಿಥಿ ಲಕ್ಷೀಶ ಗಬಲಡ್ಕ ಮಾತನಾಡಿ, ಧರ್ಮ ಎಂದರೆ ಮೌಲ್ಯಗಳು. ಮೌಲ್ಯಗಳನ್ನು ಅರ್ಥ ಮಾಡಿ ಬದುಕಿದರೆ ಆದರ್ಶ ಸಮಾಜ ನಿರ್ಮಾಣವಾಗುತ್ತದೆ, ಭಾವೈಕ್ಯತೆ ಉಂಟಾಗುತ್ತದೆ. ಇಲ್ಲಿ ಕೆರಳಿಸುವವರು ಬಹಳ ಜನ ಇದ್ದಾರೆ, ನೀವು ಕೆರಳಿದಷ್ಟೂ ಅವರಿಗೆ ಲಾಭವಾಗುತ್ತದೆ. ಆದರೆ ನೀವು ಕೆರಳದಿರುವುದೇ ಶ್ರೇಯಸ್ಕರ. ನನ್ನ ಆರಾಧನೆ ನನಗೆ, ನಿಮ್ಮ ಆರಾಧನೆ ನಿಮಗೆ. ಆದರೆ ಪರಸ್ಪರ ಒಳಿತುಗಳನ್ನು ಸ್ವೀಕರಿಸೋಣ. ಧರ್ಮದ ಮೂಲ ಗುಣಗಳನ್ನು ಕೆಡಿಸದೆ ಪರಸ್ಪರ ಭಾವೈಕ್ಯತೆಯಿಂದ ಕೂಡಿ ಬಾಳೋಣ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕ ಕಾರ್ಯದರ್ಶಿಯವರಾದ ಮುಹಮ್ಮದ್ ಕುಂಞಯವರು ಮಾತನಾಡಿ, ಪ್ರವಾದಿಯವರು ಆರನೆಯ ಶತಮಾನದಲ್ಲಿ ಜಗತ್ತಿಗೆ ಮಾದರಿಯಾದ ಸಮಾಜವನ್ನು ಕಟ್ಟಿ ಬೆಳೆಸಿದ್ದರು. ಆ ಸಮಾಜವು ಎಲ್ಲ ಕೆಡುಕುಗಳಿಂದ ಮುಕ್ತವಾದ, ಎಲ್ಲ ಒಳಿತುಗಳನ್ನು ತುಂಬಿದ ಸಮಾಜವಾಗಿತ್ತು ಎಂದು ಹೇಳಿದರು.

ಅಪರಾಧಗಳ ಹಿನ್ನೆಲೆ ಜನಾಂಗೀಯತೆ. ನಾನು ನಿನಗಿಂತ ಶ್ರೇಷ್ಠ ಎಂಬ ಭಾವನೆ. ಇದು ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಮುಖ್ಯ ಕಾರಣ. ನೀವೆಲ್ಲರೂ ಆದಮರಿಂದ ಹುಟ್ಟಿದವರು ಮತ್ತು ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು ಎಂಬ ಪ್ರವಾದಿವಚನದಂತೆ ಸಕಲರೂ ಸಮಾನರು ಎಂಬ ಭಾವನೆ ಬೆಳೆದು ಬಂದರೆ ಆದರ್ಶ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಶರೀಫ್ ನೀರ್ಮುಂಜೆಯವರು ಸ್ತುತಿಗೀತೆ ಹಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಶಾಖೆಯ ಅಧ್ಯಕ್ಷ ಮುಹಮ್ಮದ್ ಇಸ್ಹಾಕ್ ಪುತ್ತೂರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಮುಹಮ್ಮದ್ ಅಲಿ ಕಮ್ಮರಡಿಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.








Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article