
ಎಕ್ಸ್ಪರ್ಟ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ
ಕನ್ನಡ ಕೇವಲ ಮಾತೃಭಾಷೆಯಲ್ಲ, ಅದೊಂದು ಸಂಸ್ಕತಿ: ಡಾ. ಉಷಾಪ್ರಭಾ ಎನ್. ನಾಯಕ್
ಮಂಗಳೂರು: ಕನ್ನಡ ಎನ್ನುವುದು ಕೇವಲ ಮಾತೃಭಾಷೆಯಲ್ಲ. ಅದೊಂದು ಸಂಸ್ಕೃತಿ ಎಂದು ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಹೇಳಿದರು.
ವಳಚ್ಚಿಳ್ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಚಿತ್ರರಂಗಕ್ಕೆ ಮಂಗೂರಿನವರ ಕೊಡುಗೆ ಹೆಚ್ಚಿದೆ. ಬೇರೆಬೇರೆ ಪ್ರದೇಶದ ಕನ್ನಡಕ್ಕೆ ತನ್ನದೇ ಆದ ಸೊಗಡಿದೆ ನನಗೆ ಮಾತೃಭಾಷೆ ಬೇರೆಯಾದರೂ, ನಾನು ಕನ್ನಡತಿ ಎಂಬ ಹೆಮ್ಮೆ ನನಗಿದೆ. ನಾವು ಎಲ್ಲಿಯೇ (ವಿದೇಶ) ಇದ್ದರೂ, ಹೇಗಿದ್ದರೂ ತಾಯ್ನಾಡನ್ನು ಮರೆಯಬಾರದು. ವಿದೇಶ ನಮಗೆ ಕರ್ಮಭೂಮಿಯಾದರೂ, ಕನ್ನಡ ನೆಲ ನಮ್ಮ ಜನ್ಮಭೂಮಿ ಎಂಬುದು ನೆನಪಿನ್ನಲ್ಲಿರಬೇಕು. ಈ ನಾಡು ನಮಗೆ ವಿದ್ಯೆ ಮತ್ತು ಬದುಕನ್ನು ಕೊಟ್ಟಿದೆ. ತಾಯ್ನಾಡಿನ ಋಣ ತೀರಿಸಲು ಅಸಾಧ್ಯ. ಕನ್ನಡವು ಬರೆದಂತೆ ಓದುವ, ಓದಿದಂತೆ ಬರೆಯುವ ಭಾಷೆ. ಭಾಷೆಯ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕು. ಕೇವಲ ಬಾಯಿಮಾತಿಗಷ್ಟೇ ಕನ್ನಡ ಎಂದಾಗದೆ, ಬದುಕು ಕೂಡ ಕನ್ನಡವಾಗಬೇಕು. ಉಣ್ಣುವುದು, ತಿನ್ನುವುದರಲ್ಲಿ ಹಾಗೂ ನಡೆನುಡಿಯಲ್ಲಿಯೂ ನಾವು ಕನ್ನಡಿಗರಾಗಬೇಕು. ವಿದೇಶಿ ಸಂಸ್ಕೃತಿ, ಆಹಾರಕ್ಕೆ ಮಾರುಹೋಗದೆ, ನಮ್ಮ ನಾಡಿನ ಆಹಾರ ಸಂಸ್ಕೃತಿ ಎಲ್ಲವನ್ನು ಉಳಿಸಿ-ಬೆಳೆಸುವ ಕಾರ್ಯ ನಮ್ಮೆಲ್ಲರದಾಗಿದೆ. ನಾಡು ನುಡಿಯ ಮೇಲೆ ಅಭಿಮಾನ ಸದಾ ನಮ್ಮದಾಗಿರಬೇಕು ಎಂದರು.
ಕಾಲೇಜಿನ ಉಪಪ್ರಾಂಶುಪಾಲ(ಶೈಕ್ಷಣಿಕ) ಸುಬ್ರಹ್ಮಣ್ಯ ಉಡುಪ ಮಾತನಾಡಿ, 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿರುವ ಭಾಷೆ ನಮ್ಮ ಕನ್ನಡ. ಕನ್ನಡ ಲಿಪಿಗಳ ರಾಣಿ ಎಂದು ವಿನೋಭಾ ಭಾವೆ ಹೇಳಿದ್ದಾರೆ. ವಿಶ್ವದ ಭಾಷೆಗಳಲ್ಲಿ ಕನ್ನಡ ಭಾಷೆಗೆ ಅದ್ವಿತೀಯ ಸ್ಥಾನವಿದೆ ಎಂದು ವಿವರಿಸಿದರು.
ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕುಶಾಲ್ ಆರ್.ಇ. ಸ್ವಾಗತಿಸಿ, ವಂದಿಸಿದರು.