
ಎಡನೀರು ಮಠದ ಶ್ರೀಗಳ ವಾಹನಕ್ಕೆ ಅಡ್ಡಿ: ಬ್ರಾಹ್ಮಣ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಗ್ರಹ
ಮಂಗಳೂರು: ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಶ್ರೀಗಳು ಸಂಚರಿಸುತ್ತಿದ್ದ ಕಾರನ್ನು ಸಮಾಜಘಾತುಕ ಶಕ್ತಿಗಳು ಅಡ್ಡಗಟ್ಟಿ ಹಾನಿಗೊಳಿಸಿರುವುದು ಧರ್ಮದ ಮೇಲಾಗಿರುವ ದಾಳಿಯಾಗಿದ್ದು, ದಾಳಿ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಬ್ರಾಹ್ಮಣ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಪ್ರಕಟಣೆಯಲ್ಲಿ ಆಗ್ರಹಿಸಿದೆ.
ಸುಮಾರು ನಾಲ್ಕು ಶತಮಾನಗಳ ಇತಿಹಾಸ ಹೊಂದಿರುವ ಎಡನೀರು ಸಂಸ್ಕಾನದ ಪೀಠಾಧಿಪತಿಯಾಗಿರುವ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಯಾರಿಗೂ ಕೆಡಕನ್ನು ಬಯಸದೆ ಧರ್ಮ ಸೇವೆ ಮಾಡಿಕೊಂಡಿರುವ ಬರುತ್ತಿರುವ ಯತಿಗಳಾಗಿದ್ದಾರೆ. ಇಂತಹ ಯತಿಗಳ ವಿರುದ್ಧ ನಡೆದಿರುವ ದಾಳಿ ಗಂಭೀರ ವಿಚಾರವಾಗಿದೆ. ಕಿಡಿಗೇಡಿಗಳು ನಡುರಸ್ತೆಯಲ್ಲೇ ಈ ರೀತಿ ಕಾನೂನು ಕೈಗೆತ್ತಿಕೊಂಡು ಹಲ್ಲೆಗೆ ಮುಂದಾಗಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ ಎಂದು ಮಹಾಸಭಾದ ಜಿಲ್ಲಾ ಸಂಚಾಲಕ ಶ್ರೀಧರ ಹೊಳ್ಳ ಹೇಳಿದ್ದಾರೆ.
ಕೇರಳ ಸರಕಾರವು ಸ್ವಾಮೀಜಿ ಮೇಲಿನ ಹಲ್ಲೆ ಯತ್ನ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು. ಮಾತ್ರವಲ್ಲದೆ ಎಡನೀರು ಶ್ರೀಗಳಿಗೆ ಸೂಕ್ತ ಭದ್ರತೆಯನ್ನು ಕೇರಳ ಸರಕಾರ ನೀಡಬೇಕು ಎಂದು ಸಮುದಾಯ ಒತ್ತಾಯಿಸಿದ್ದಾರೆ.
ಆಧ್ಯಾತ್ಮಿಕ ಗುರು ಎಡನೀರು ಸಂಸ್ಕಾನದ ಶ್ರೀಗಳ ಮೇಲೆ ನಡೆದಿರುವ ಈ ದಾಳಿಯು ಹಿಂದೂ ಸಮುದಾಯದವರ ಮೇಲೆ ನಡೆದಿರುವ ದಾಳಿಯಾಗಿದೆ. ಲಕ್ಷಾಂತರ ಹಿಂದೂಗಳು ಭಕ್ತಿಯಿಂದ ಆರಾಧಿಸುವ ಹಾಗೂ ಹಿಂದೂ ಸಮಾಜದ ಆದರಣೀಯರು, ಮಾರ್ಗದರ್ಶಕರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.