ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಟಿಪ್ಪು, ಮೊಘಲ್ ದುರಾಡಳಿತ ನಡೆಸುತ್ತಿದ್ದಾರೆ: ಕ್ಯಾ. ಬ್ರಿಜೇಶ್ ಚೌಟ

ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಟಿಪ್ಪು, ಮೊಘಲ್ ದುರಾಡಳಿತ ನಡೆಸುತ್ತಿದ್ದಾರೆ: ಕ್ಯಾ. ಬ್ರಿಜೇಶ್ ಚೌಟ


ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊಘಲ್ ಹಾಗೂ ಟಿಪ್ಪು ಮಾದರಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಸಿದ್ಧಾಂತ ಮತ್ತು ಜೀವನ ಪದ್ಧತಿಯಂತೆ ಬದುಕುವವರನ್ನು ಶರಣಾಗುವಂತೆ ಮಾಡುತ್ತಿದ್ದಾರೆ. ಇದು ಹಿಂದುಗಳನ್ನು ಮುಗಿಸುವ ಷಡ್ಯಂತ್ರವಾಗಿದ್ದು, ಹಿಂದೆ ಟಿಪ್ಪು ಹೇಗೆ ಮಾಡುತ್ತಿದ್ದನೋ, ಅದೇ ರೀತಿ ಈಗ ಸಿದ್ದರಾಮಯ್ಯ ಹಿಂದುಗಳ ಬದುಕು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದರು. 

ರಾಜ್ಯಾದ್ಯಂತ ನಡೆಯುತ್ತಿರುವ ವಕ್ಫ್ ಅಕ್ರಮ ಹಾಗೂ ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಥ್ ನೀಡುತ್ತಿದೆ ಎಂದು ಆರೋಪಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆಯಡಿ ಶುಕ್ರವಾರ ಮಂಗಳೂರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ದಿನಪೂರ್ತಿ ಧರಣಿ ಪ್ರತಿಭಟನೆ ನಡೆಸಿದೆ.

ಮಂಗಳೂರಿನ ಪುರಭವನ ಎದುರಿನ ರಾಜಾಜಿ ಪಾರ್ಕ್ನಲ್ಲಿ ಬೃಹತ್ ಪೆಂಡಾಲ್ ಹಾಕಿ ಭಜನಾ ಸಂಕೀರ್ತನೆ ಜೊತೆಗೆ ಧರಣಿ ಪ್ರತಿಭಟನೆ ನಡೆಸಲಾಯಿತು.

ಪುರಭವನ ಎದುರು ಅಂಬೇಡ್ಕರ್ ಹಾಗೂ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಧರಣಿ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ಈ ಪ್ರತಿಭಟನೆಯಲ್ಲಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಮುಖಂಡರು ಭಾಗಿಯಾಗಿದ್ದರು. ಸಂಜೆ ವರೆಗೆ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸರ್ಕಾರ ಹಾಗೂ ಸಚಿವರ ವಿರುದ್ಧ ವಿವಿಧ ಘೋಷಣಾ ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತುಘಲಕ್, ಟಿಪ್ಪು ಮಾದರಿಯ ದುರಾಡಳಿತ ನಡೆಸುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್ ಅವರು ವಕ್ಫ್ ಮೂಲಕ ಜನರ ಆಸ್ತಿ ಕಬಳಿಸುತ್ತಿದ್ದಾರೆ. ಭೂ ಕಬಳಿಕೆಗೆ ಸಿದ್ದರಾಮಯ್ಯ ಮತ್ತು ಜಮೀರ್ ಖಾನ್ ಅವರ ಜೊಯಿಂಟ್ ವೆಂಚರ್ ನಡೆಯುತ್ತಿದೆ. ರಾಜ್ಯದಲ್ಲಿ ವಕ್ಫ್ ಮೂಲಕ ಲ್ಯಾಂಡ್ ಜಿಹಾದ್ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಮಳೆ ಹಾನಿ, ತಡೆಗೋಡೆ ನಿರ್ಮಾಣಕ್ಕೆ ಶಾಸಕರಿಗೆ ಸರ್ಕಾರ ಬಿಡಿಗಾಸು ನೀಡುತ್ತಿಲ್ಲ. ಈ ಮಧ್ಯೆ ಸರ್ಕಾರದಿಂದ ವಕ್ಫ್ ದಂಧೆ ಆರಂಭವಾಗಿದೆ ಎಂದು ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕಿದರು.

ಪ್ರತಿಯೊಬ್ಬ ಹಿಂದು, ಮುಸ್ಲಿಂ, ಕ್ರೈಸ್ತರ ಆಸ್ತಿಯನ್ನೂ ವಕ್ಫ್ ಕಬಳಿಸಿದೆ. ಹೀಗಾಗಿ ಬಿಜೆಪಿ ವತಿಯಿಂದ ಪ್ರತಿ ಹಿಂದುಗಳ ಮನೆಗೆ ತೆರಳಿ ಪಹಣಿ ಪತ್ರ(ಆರ್‌ಟಿಸಿ) ಪರಿಶೀಲನೆ ನಡೆಸುತ್ತೇವೆ. ಇದನ್ನು ಎಲ್ಲ ಕಡೆಗಳಲ್ಲಿ ಅಭಿಯಾನವಾಗಿ ಕೈಗೆತ್ತಿಕೊಳ್ಳಲಾಗುವುದು. ಧರ್ಮವನ್ನು ಉಳಿಸುವ ಈ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು. ಅಲ್ಲದೆ ವಕ್ಫ್ ಕಬಳಿಕೆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಸಂಸದರು ಆಗ್ರಹಿಸಿದರು.

ಮಠ, ಮಂದಿರ, ರೈತರ ಭೂಮಿಯನ್ನು ಕಬಳಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಹಿಂದು ವಿರೋಧಿ ಎನಿಸಿದ್ದಾರೆ. ವಕ್ಫ್ ನೋಟಿಸ್ ವಾಪಸ್ ಪಡೆಯುವಂತೆ ಸಿಎಂ ಸೂಚನೆ ನೀಡಿದರೂ

ವಕ್ಫ್‌ನಲ್ಲಿ ಇತ್ಯರ್ಥವಾಗದೆ ಏನೂ ಪ್ರಯೋಜನವಿಲ್ಲ. ಇದರಿಂದಾಗಿ ಹಿಂದುಗಳು ತಮ್ಮದೇ ಜಾಗಕ್ಕಾಗಿ ವಕ್ಫ್ ಮುಂದೆ ಕೈಚಾಚಬೇಕಾದ ಪರಿಸ್ಥಿತಿ ಉದ್ಭವವಾಗಿದೆ. 2016ರಲ್ಲಿ 1.20 ಲಕ್ಷ ಎಕರೆ ಇದ್ದ ವಕ್ಫ್ ಭೂಮಿ 2024ರಲ್ಲಿ 9.40 ಲಕ್ಷ ಎಕರೆಗೆ ಹೆಚ್ಚಳವಾಗಿದೆ. ಮುಸ್ಲಿಮರ ಹಿತಾಸಕ್ತಿ ಕಾಪಾಡುವ ಮೂಲಕ ಓಟ್‌ಬ್ಯಾಂಕ್  ಷಡ್ಯಂತ್ರವನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ. ತನ್ನದೇ ಆಸ್ತಿಗಾಗಿ ಹಿಂದುಗಳು ವಕ್ಫ್ ಎದುರು ಮಂಡಿಯೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಉಚಿತವಾಗಿ ಬಂದ ಆಸ್ತಿಯನ್ನು ವಕ್ಫ್ನವರು ಯಾಕೆ ಬಿಟ್ಟುಕೊಡುತ್ತಾರೆ? ವಶಪಡಿಸಿದ ವಕ್ಫ್ ಆಸ್ತಿ ಮರಳಿಸದೇ ಇದ್ದರೆ ಉಗ್ರ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಎಲ್ಲರ ಆಸ್ತಿಯನ್ನು ವಕ್ಫ್ ಕಬಳಿಸಿದ್ದು, ಜಾತಿ, ಮತ, ಧರ್ಮ ಬಿಟ್ಟು ಯೋಚಿಸಬೇಕಾಗಿದೆ. ವಕ್ಫ್ ಕಬಳಿಕೆ ಬಿಜೆಪಿಗೆ ಮಾತ್ರವಲ್ಲ ಎಲ್ಲ ಪಕ್ಷಗಳಿಗೂ ಸಮಸ್ಯೆ ಆಗಲಿದೆ. ಈ ಬಗ್ಗೆ ಸರ್ವಪಕ್ಷಗಳ ಮುಖಂಡರ ಆಲೋಚನೆ ಮಾಡಬೇಕು. ಭಿನ್ನಾಭಿಪ್ರಾಯ ಬದಿಗಿಟ್ಟು ಹೋರಾಟಕ್ಕೆ ಮುಂದಾಗಬೇಕು. ಸರ್ಕಾರ ನೋಟಿಸ್ ನೀಡುವುದನ್ನು ಮತ್ತೆ ಮುಂದುವರಿಸಿದರೆ ಹೋರಾಟ ನಡೆಸಲಾಗುವುದು ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.

ಶಾಸಕ ರಾಜೇಶ್ ನಾಯ್ಕ್, ಮೇಯರ್ ಮನೋಜ್ ಕುಮಾರ್, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ಮೋನಪ್ಪ ಭಂಡಾರಿ, ಪ್ರೇಮಾನಂದ ಶೆಟ್ಟಿ, ರಾಜೇಶ್ ಕಾವೇರಿ, ನಂದನ್ ಮಲ್ಯ, ರಾಜಗೋಪಾಲ ರೈ, ಯತೀಶ್ ಆರ್ವಾರ್, ಗುರುಪ್ರಸಾದ್, ಪೂಜಾ ಪೈ, ಶಕೀಲ ಕಾವಾ, ಪೂರ್ಣಿಮಾ, ಕಿರಣ್ ಕುಮಾರ್ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article