
ಶಕ್ತಿ ವಸತಿ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ
ಮಂಗಳೂರು: ಶಕ್ತಿ ವಸತಿ ಶಾಲೆ, ಶಕ್ತಿನಗರ ಮಂಗಳೂರು ಇಲ್ಲಿ ನ.22 ರಂದು ಶಕ್ತಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ವಾರ್ಷಿಕ ಕ್ರೀಡಾಕೂಟವು ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಹಾಗೂ ಜಿಲ್ಲಾ ಉಪನಿರ್ದೇಶಕಿ ರಾಜಲಕ್ಷ್ಮಿ ಕೆ. ಅವರು ಶಾಂತಿ ಮತ್ತು ಪ್ರೀತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಹಿತ ದೃಷ್ಟಿಯಲ್ಲಿ ಕ್ರೀಡೆಯ ಪಾತ್ರವು ಮಹತ್ತರವಾದದ್ದು, ಹಾಗಾಗಿ ದಿನದಲ್ಲಿ ಕಿಂಚಿತ್ತು ಸಮಯವನ್ನಾದರೂ ಆಟಕ್ಕೋಸ್ಕರ ಮೀಸಲಿಡಬೇಕು. ಶಕ್ತಿ ಶಾಲೆಯ ವಿದಾರ್ಥಿಗಳನ್ನು ಮುಂದೊಂದು ದಿನ ಒಲಿಂಪಿಕ್ ಕ್ರೀಡಾಕೂಟದಲ್ಲಿ ನೋಡುವಂತಾಗಲಿ ಎಂದು ಶುಭ ಹಾರೈಸಿದರು.
ಶಕ್ತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಮಾತನಾಡಿ, ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ, ಶಕ್ತಿ ವಸತಿಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಹಾಗೂ ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ಸುಷ್ಮಾ ಸತೀಶ್ ಜೊತೆಗೂಡಿದರು.
ಬಳಿಕ ಆರಂಭಗೊಂಡ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಶಿಸ್ತು ಬದ್ಧ ಪದ್ರರ್ಶನ, ನಡಿಗೆ ಹಾಗೂ ಕವಾಯತು ಆಕರ್ಷಣೀಯವಾಗಿತ್ತು. ಗೋಣಿಚೀಲ ಓಟ, ಕಪ್ಪೆಜಿಗಿತ, ಲಿಂಬೆ ಚಮಚ, ಓಟ ಸ್ಪರ್ಧೆ ಹೀಗೆ ಹಲವಾರು ಆಟೋಟಗಳು ಈ ಕ್ರೀಡಾಕೂಟದಲ್ಲಿ ವೀಕ್ಷಕರ ಗಮನಸೆಳೆದವು.
ಶಾಲಾ ಶಿಕ್ಷಕಿ ಶರ್ವಾನಿ ಕಾರ್ಯಕ್ರಮ ನಿರೂಪಿಸಿದರು. 1 ಹಾಗೂ 2ನೇ ತರಗತಿಯ ಸಂಯೋಜಕಿ ಪ್ರಿಯದರ್ಶಿನಿ ವಂದಿಸಿದರು. ಶಾಲೆಯ 3, 4 ಹಾಗೂ 5 ನೇ ತರಗತಿಯ ಸಂಯೋಜಕಿ ಅನ್ನೆಟ್ ಸಹಕರಿಸಿದರು.