ಸಿದ್ದರಾಮಯ್ಯ ರಾಜೀನಾಮೆ ಕೇಳುವುದು ಸರಿಯಲ್ಲ: ಶಾಸಕ ಜಿ.ಟಿ. ದೇವೇಗೌಡ
ಮಂಗಳೂರು: ಇಲ್ಲಿ ಯಾರ ಮೇಲೆ ಎಫ್.ಐ.ಆರ್ ಆಗಿದೆ ಎಂದು ಗೊತ್ತು. ನ್ಯಾಯಾಲಯದ ತೀರ್ಪು ಬಂದು ತಪ್ಪಿತಸ್ಥ ಎಂದ ಮೇಲೆ ಅವರಿಗೆ ಶಿಕ್ಷೆ ಆಗುತ್ತೋ, ರಾಜಿನಾಮೆ ಕೊಡಬೇಕು, ಜೈಲಿಗೆ ಹಾಕಬೇಕೋ ಅದನ್ನು ಮಾಡಬೇಕು. ಅದು ಬಿಟ್ಟು ಕಾಂಗ್ರೆಸ್ ಮಂತ್ರಿಗಳು ದಿನಾ ಕುಮಾರಸ್ವಾಮಿ ರಾಜಿನಾಮೆ ಕೊಡಿ ಎಂದು ಕೇಳುವುದು, ಬಿಜೆಪಿ, ದಳದವರು ಸೇರಿ ಸಿದ್ದರಾಮಯ್ಯ ರಾಜಿನಾಮೆ ಕೊಡಿ ಎಂದು ಕೇಳೋದು ಸರಿಯಲ್ಲ. ನ್ಯಾಯಾಲಯದ ತೀರ್ಪು ಬರುವವರೆಗೆ ಯಾರೂ ರಾಜಿನಾಮೆ ಕೊಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟದಲ್ಲಿ ನಾನು ಅಂತಹದ್ದೇನು ತಪ್ಪು ಮಾತನಾಡಿಲ್ಲ. ಸಿದ್ದರಾಮಯ್ಯನವರು 135 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದಾರೆ. ಎಚ್.ಡಿ ಕುಮಾರಸ್ವಾಮಿ 2 ಲಕ್ಷ ಲೀಡ್‌ನಲ್ಲಿ ಗೆದ್ದು ಸಂಸದ ಆಗಿದ್ದಾರೆ. ಅಶೋಕ್ ಅವರು ಗೆದ್ದು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಕೇಂದ್ರದಲ್ಲೂ ಕೆಲವರ ಮೇಲೆ ಎಫ್.ಐ.ಆರ್. ಆಗಿದೆ.
ಹಾಗೆ ರಾಜಿನಾಮೆ ನೀಡಿದರೆ, ಇಡೀ ವಿಧಾನಸೌಧದಲ್ಲಿರುವ ಶೇ. 75 ಮಂದಿ ರಾಜಿನಾಮೆ ನೀಡಬೇಕಾಗುತ್ತದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಹಳಷ್ಟು ಮಂದಿ ಇದ್ದಾರೆ. ಇಷ್ಟು ಹೇಳಿದ್ದೇ ದೊಡ್ಡ ಅಪರಾಧ ಎಂದು ತಿಳಿದುಕೊಂಡರೆ ನಾನು ಏನು ಮಾಡಬೇಕಾಗುತ್ತದೆ ಎಂದರು.
ವಿರೋಧ ಪಕ್ಷದ ನಾಯಕನ ಆಯ್ಕೆ ಸಂದರ್ಭದಲ್ಲಿ ಕೋರ್ ಕಮಿಟಿ ಮೀಟಿಂಗ್ ಕರೆಯುತ್ತಾರೆ. ನಾನೂ ಪಬ್ಲಿಕ್ ಅಕೌಂಟ್ಸ್ ಕಮಿಟಿ ಪ್ರವಾಸ ಹೋಗಿದ್ದೆ. ಆ ಸಂದರ್ಭದಲ್ಲಿ ಮೀಟಿಂಗ್ ಕರೆದು ನನ್ನ ಬಿಟ್ಟು ನಾಯಕನ ಆಯ್ಕೆ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮೈಸೂರಿಗೆ ಬಂದಾಗ ಕರೆದಿದ್ದರು. ನಾನು ಆ ಸಭೆಯಲ್ಲಿ ಭಾಗವಹಿಸಿದ್ದೆ. ಅಲ್ಲಿ ಸಾ.ರಾ ಮಹೇಶ್ ಇನ್ನು ಎಚ್.ಡಿ ಕುಮಾರಸ್ವಾಮಿ, ಎಚ್.ಡಿ ದೇವೇ ಗೌಡರು ಇಲ್ಲ, ಇನ್ನು ನಾನೇ ಬಿ.ಫಾರಂ ಕೊಡುವುದು ಎಂದು ಭಾಷಣ ಮಾಡಿದರು. ಆಗ ನಿಖಿಲ್ ಕುಮಾರಸ್ವಾಮಿ ಬಂದು ತಪ್ಪಾಗಿ ಭಾಷಣ ಮಾಡಿದ್ದಾರೆ ಕ್ಷಮಿಸಿ ಎಂದು ಹೇಳಿದ್ದರು. ನಾನು ಪಕ್ಷ ಕಟ್ಟುವ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇನೆ. ಯಾಕೆ ನನ್ನನ್ನು ಬಿಟ್ಟಿದ್ದಾರೆ ಎಂದು ಅವರೇ ಹೇಳಬೇಕು ಎಂದು ಹೇಳಿದರು.