ಸ್ನೇಹಮಯಿ ಆರೋಪದಲ್ಲಿ ಹುರುಳಿಲ್ಲ: ಜಿ.ಟಿ. ದೇವೇಗೌಡ
ಮಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ)ದಲ್ಲಿ ಶಾಸಕನಾದ ನನ್ನ ಪ್ರಭಾವ ಬಳಸಿ ಮಹೇಂದ್ರ 19 ಸೈಟ್ ಪಡೆದಿರುವ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ಆರೋಪದಲ್ಲಿ ಹುರುಳಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಸ್ನೇಹಮಯಿ ಕೃಷ್ಣ ಬುದ್ಧಿವಂತ ಅವನಲ್ಲಿ ಶಕ್ತಿ ಇದೆ. ಒಂದು ಎಕರೆ ಭೂಮಿ ಸ್ವಾಧೀನಪಡಿಸಿ ದುಡ್ಡಿನ ಪರಿಹಾರ ನೀಡಿದರೆ ಒಂದು ಸೈಟ್ ಕೊಡುತ್ತಾರೆ. ಆ ಜಮೀನಿಗೆ ಪರಿಹಾರ ಕೊಡದೇ ಇದ್ದರೆ 50:50 ನಲ್ಲಿ ಸೈಟ್ ಕೊಡಬೇಕು. ರೈತರ ಜಮೀನಿಗೆ ಇದನ್ನು ಕಾನೂನು ಬದ್ಧವಾಗಿ ಕೊಡಬೇಕು ಮೂಡಾ ಪಡೆದಿರುವ ಜಮೀನಿಗೆ 50:50 ಸೈಟ್ ಕೊಡಲೇ ಬೇಕು. ಸೈಟ್ ಕೊಡುವ ಪ್ರಕ್ರಿಯೆಯಲ್ಲಿ ತಪ್ಪಾಗಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ನನ್ನ ಸಂಬಂಧಿಯೇ ಆಗಲಿ ಯಾರೇ ಆಗಲಿ ಶಿಕ್ಷೆಯಾಗಲಿ. ಕಾನೂನಿನ ವಿರುದ್ಧವಾಗಿ ಮಾಡಿದರೆ ಶಿಕ್ಷೆಯಾಗಲಿ ಎಂದರು.
ಭೂಮಿ ನೀಡಿದ ರೈತನಿಗೆ 50:50 ನಲ್ಲಿ ಸೈಟ್ ಕೊಡಲೇಬೇಕು. ಹೀಗೆ ಮಾಡುವ ಸಂದರ್ಭದಲ್ಲಿ ಕೆಲವು ನ್ಯೂನತೆಗಳಾಗಿದೆ. ರೈತರಿಗೆ ಅಧಿಕೃತವಾಗಿ 50:50 ಸೈಟ್ ಕೊಡುವುದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ. 50:50 ಸೈಟ್ ಕೊಡುವುದರಲ್ಲಿ ದುರುಪಯೋಗ ಆಗಿದ್ದರೆ ಅವರಿಗೆ ಶಿಕ್ಷೆಯಾಗಬೇಕು. ಕಾನೂನು ಉಲ್ಲಂಘನೆ ಆದರೂ ಎಲ್ಲರಿಗೂ ಶಿಕ್ಷೆ ಆಗಬೇಕು ಎಂದರು.
ಚನ್ನಪಟ್ಟಣ ಉಪಚುನಾವಣಾ ಪ್ರಚಾರದಲ್ಲಿ ಜಿ.ಟಿ ದೇವೇಗೌಡ ಪ್ರಚಾರ ಕಾರ್ಯದಿಂದ ಹೊರಗುಳಿದಿರುವ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಸಹ ನನ್ನನ್ನು ಚುನಾವಣೆ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ. ಕೋರ್ ಕಮಿಟಿ ಅಧ್ಯಕ್ಷನಾಗಿದ್ದರೂ ಸಹ ಪ್ರಚಾರದ ಪಟ್ಟಿಯಿಂದ ನನ್ನ ಹೆಸರನ್ನು ತೆಗೆದಿದ್ದಾರೆ. ಹಾಗಾಗಿ ನಾನು ಭಾಗವಹಿಸಿಲ್ಲ. ದೂರವಾಣಿ ಮೂಲಕವೂ ನನ್ನನ್ನು ಕರೆದಿಲ್ಲ. ಕೋರ್ ಕಮಿಟಿ ಅಧ್ಯಕ್ಷನನ್ನು ಬಿಟ್ಟೇ ಮಾಡಿದ್ದಾರೆ. ಯಾಕಾಗಿ ಈ ರೀತಿ ಮಾಡಿದ್ದಾರೆ ಎಂದು ಅವರೇ ಹೇಳಬೇಕು ಎಂದರು.