ಹಕ್ಕು ಪತ್ರ ನೀಡದಿದ್ದರೆ ಅಹೋರಾತ್ರಿ ಧರಣಿ

ಹಕ್ಕು ಪತ್ರ ನೀಡದಿದ್ದರೆ ಅಹೋರಾತ್ರಿ ಧರಣಿ


ಮಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸುಲ್ಕೇರಿ ಗ್ರಾಮದ ನಾಯಿದಗುರಿಯ ಮಲೆಕುಡಿಯ ಸಮುದಾಯದ 33 ನಿರಾಶ್ರಿತ ಕುಟುಂಬಗಳಿಗೆ ಪುನರ್ವಸತಿಗೆ ಮೀಸಲಿಟ್ಟ ಜಾಗವನ್ನು ಗಡಿ ಗುರುತು ಮಾಡಿ ಐಟಿಡಿಪಿ ಇಲಾಖೆಗೆ ಹಸ್ತಾಂತರಿಸಬೇಕು. ನಾಯಿದಗುರಿಯಲ್ಲಿ ವಾಸವಾಗಿರುವ ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ ಹಕ್ಕುಪತ್ರವನ್ನು ಜಿಲ್ಲಾಡಳಿತ ವಿತರಿಸಬೇಕು. ಒಂದು ತಿಂಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮ ವಹಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸುವುದಾಗಿ ಮಲೆಕುಡಿಯರ ಸಂಘ ಎಚ್ಚರಿಸಿದೆ. 

ನಗರದ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀಧರ ಗೌಡ, ರಾಷ್ಟ್ರೀಯ ಉದ್ಯಾನವನದ ಸಮಸ್ಯೆಯ ಮಧ್ಯೆ ಕಸ್ತೂರಿ ರಂಗನ್ ವರದಿಯ ಆತಂಕ, ನಕ್ಸಲ್ ಸಮಸ್ಯೆ ಕೂಡಾ ಮಲೆಕುಡಿಯ ಸಮುದಾಯವವನ್ನು ಕಾಡುತ್ತಿದೆ. ಅನೇಕ ಕಾನೂನಾತ್ಮಕ ಸಮಸ್ಯೆಗಳನ್ನು ಮಲೆಕುಡಿಯ ಸಮುದಾಯ ಎದುರಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸಭೆ ಕರೆದು ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. 

2011ರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಿರಾಶ್ರಿತ ಕುಟುಂಬಗಳು ಸುಲ್ಕೇರಿ ಗ್ರಾಮದ ಸ. ನಂ 65/1ಪಿ1ರ ಸರಕಾರಿ ಜಮೀನಿನಲಿಲ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದ ಸಂದರ್ಭ ಆಡಳಿತ ವ್ಯವಸ್ಥೆ ಅವರ ಮೇಲೆ ದೌರ್ಜನ್ಯ ಎಸಗಿತ್ತು. ಅನೇಕ ಹೋರಾಟಗಳ ಬಳಿಕ ಜಿಲ್ಲಾಡಳಿತ 190 ಎಕರೆ ಜಮೀನನ್ನು ಗಿರಿಜನ ಪುನರ್ವಸತಿಗೆ ಮೀಸಲಿಟ್ಟು ಆದೇಶ ಮಾಡಿತ್ತು. ಆದರೆ ಈ ಸಂದರ್ಭ ಒಂದಷ್ಟು ಪ್ರಭಾವಿ ವ್ಯಕ್ತಿಗಳು ಐದು ಕುಟುಂಬಗಳು ವಾಸವಾಗಿದ್ದ ಜಮೀನನ್ನು ಬೆಳ್ತಂಗಡಿ ತಾ.ಪಂ.ಗೆ ಸಾರ್ವಜನಿಕ ಉದ್ದೇಶಕ್ಕೆ 15 ವರ್ಷ ಪರಭಾರೆ ನಿಷೇಧ ಮಾಡಬಾರದು ಎಂಬ ಷರತ್ತಿನೊಂದಿಗೆ ಮೀಸಲಿಟ್ಟಿತ್ತು. ಇದು ಸುಲ್ಕೇರಿ ಗ್ರಾಮದ ನಾಯಿದ ಗುರಿ ಮಲೆಕುಡಿಯ ಸಮುದಾಯದ ಜನರಿಗೆ ಹಕ್ಕುಪತ್ರ ಸಿಗಬಾರದು ಎಂಬ ನಿಟ್ಟಿನಲ್ಲಿ ನಡೆಸಲಾದ ಷಡ್ಯಂತ್ರ ಎಂದವರು ಆರೋಪಿಸಿದರು. 

ವಸಂತಿ ನೆಲ್ಲಿಕಾರು, ಬಾಲಕೃಷ್ಣ, ಗಣೇಶ್, ಸಂಜೀವ, ಹರೀಶ್ ಮೊದಲಾವದರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article