ಟ್ರಾಫಿಕ್ ಸಮಸ್ಯೆ ಇತ್ಯರ್ಥಕ್ಕೆ ಮತ್ತೆ ಸಭೆ

ಟ್ರಾಫಿಕ್ ಸಮಸ್ಯೆ ಇತ್ಯರ್ಥಕ್ಕೆ ಮತ್ತೆ ಸಭೆ


ಮಂಗಳೂರು: ಈಗಾಗಲೇ ಹಿಂದಿನ ಮೇಯರ್ ನೇತೃತ್ವದಲ್ಲಿ ನಗರದಲ್ಲಿ ಟ್ರಾಫಿಕ್ಸಮಸ್ಯೆ ಬಗೆಹರಿಸಲು ಸಭೆ ಕರೆಯಲಾಗಿದ್ದರೂ ನಗರದಲ್ಲಿ ಅವ್ಯವಸ್ಥೆ ಮುಂದುವರಿದಿದೆ. ಟ್ರಾಫಿಕ್ ಪೊಲೀಸರು ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಸಭೆಗೂ ಹಾಜರಾಗುತ್ತಿಲ್ಲ ಎಂದು ಸದಸ್ಯ ನವೀನ್ ಡಿಸೋಜಾ ಆರೋಪಿಸಿದರು. 

ನೂತನ ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಪೊಲೀಸ್ ಅಧಿಕಾರಿಗಳು ಮೇಲಾಟ ಮಾಡಿ ನಗರಕ್ಕೆ ಬರಲು ಪ್ರಯತ್ನಿಸುತ್ತಾರೆ. ಆದರೆ ಸಭೆಗಳಿಗೆ ಹಾಜರಾಗುವುದಿಲ್ಲ. ನಗರದ ಬಹು ಮುಖ್ಯವಾದ ಟ್ರಾಫಿಕ್ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಎನ್‌ಎಚ್‌ಎಐನವರು ಸ್ಪಂದಿಸುತ್ತಿಲ್ಲ ಎಂದು ಶಾಸಕ ಐವನ್ ಡಿಸೋಜಾ ಸಭೆಯಲ್ಲಿ ಆಕ್ಷೇಪಿಸಿದರು. 

ನಗರದ ಒಳಚರಂಡಿ ನೀರು ನದಿ ಮೂಲಗಳಿಗೆ ಸೇರುತ್ತಿರುವ ಕುರಿತಂತೆ ರಾಷ್ಟ್ರೀಯ ಹಸಿರು ಪೀಠ (ಎನ್ಜಿಟಿ) ಸೂಕ್ತ ಯೋಜನೆ ರೂಪಿಸಲು 40 ಕೋಟಿರೂ.ಗಳ ಅನುದಾನ ಒದಗಿಸಿದೆ. ಆದರೆ ಈ ಬಗ್ಗೆ ಪಾಲಿಕೆಯ ಅಧಿಕಾರಿಗಳು ಪಾಲಿಕೆಯ 60 ಸದಸ್ಯರು, ಸಂಸದರು, ಶಾಸಕರ ಗಮನಕ್ಕೆ ತಾರದೆ ಈ ಬಗ್ಗೆ ಡಿಪಿಆರ್ ಮಾಡಿ ಸರಕಾರಕ್ಕೆ ಕಳುಹಿಸಿ ದ್ದಾರೆ. ಇದು ಹೇಗೆ ಸಾಧ್ಯ ಎಂದು ಮಾಜಿ ಮೇಯರ್ ಸುಧೀರ್ ಶೆಟ್ಟಿ ಪ್ರಶ್ನಿಸಿದರು. 

ಮನಪಾದಿಂದ ಆಗುವ ಡಿಪಿಆರ್ ಪರಿಷತ್ತಿನ ಅನುಮೋದನೆ ಪಡೆದು ಸರಕಾರಕ್ಕೆ ಸಲ್ಲಿಕೆಯಾಗಬೇಕು. ಅದು ಹಾಗೆ ಆಗದೆ ನೇರವಾಗಿ ಸರಕಾರಕ್ಕೆ ಹೇಗೆ ಹೋಗುತ್ತದೆ. ಅಧಿಕಾರಿಗಳು ಪಾಲಿಕೆಯ ಗಮನಕ್ಕೆ ಯಾಕೆ ತಂದಿಲ್ಲ ಎಂದು ಸದಸ್ಯ ವಿನಯರಾಜ್ ಅವರೂ ಪ್ರಶ್ನಿಸಿದರು. 

ಉಪ ಮೇಯರ್ ಭಾನುಮತಿ, ವಿವಿಧ ಸ್ಥಾಯಿ ಸಮಿತಿ ಸದಸ್ಯರಾದ ವೀಣಾ ಮಂಗಳ, ಸರಿತಾ ಶಶಿಧರ್, ಕದ್ರಿ ಮನೋಹರ ಶೆಟ್ಟಿ, ಸುಮಿತ್ರಾ ಕರಿಯ ಉಪಸ್ಥಿತರಿದ್ದರು. 

ಕ್ಲಾಕ್ ಟವರ್ ರಸ್ತೆ ದ್ವಿಮುಖ ಸಂಚಾರಕ್ಕೆ ಆಗ್ರಹ:

ಕ್ಲಾಕ್ ಟವರ್‌ನಿಂದ ಆರ್‌ಟಿಒ ಒವರೆಗಿನ ರಸ್ತೆಯನ್ನು ಮೊದಲಿದ್ದಂತೆಯೇ ದ್ವಿಮುಖ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಪಾಲಿಕೆ ಯಲ್ಲಿ ಈ ಬಗ್ಗೆ ನಿರ್ಣಯವೂ ಮಾಡಲಾಗಿತ್ತು. ಜನರು ಇದರಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕವಾಗಿಯೂ ಈ ರಸ್ತೆ ದ್ವಿಮುಖ ಮಾಡಲು ಒತ್ತಾಯಿಸಿದ್ದಾರೆ. ಆದರೂ ಕ್ರಮ ಆಗಿಲ್ಲ ಎಂದು ಸದಸ್ಯ ಅಬ್ದುಲ್ ಲತೀಫ್ ಸಭೆಯ ಗಮನ ಸೆಳೆದರು. 

ಹ್ಯಾಮಿಲ್ಟನ್ ಮತ್ತು ಎಬಿಶೆಟ್ಟಿ ವೃತ್ತವೂ ನಿರ್ಮಾಣ ಆಗಬೇಕು ಎಂದು ಸದಸ್ಯ ಶಶಿಧರ ಹೆಗ್ಡೆ ತಿಳಿಸಿದಾಗ ಈ ಬಗ್ಗೆ ಟ್ರಾಫಿಕ್ ಸಭೆಯಲ್ಲಿ ಮಾತನಾಡುವುದಾಗಿ ಮೇಯರ್ ಮನೋಜ್ ಕುಮಾರ್ ತಿಳಿಸಿದರು. 

ಪಾಲಿಕೆ ವ್ಯಾಪ್ತಿಯ 2016ರಲ್ಲಿ 930 ಬಡ ಫಲಾನುಭವಿಗಳಿಗೆ ಜಿ+3 ಮಾದರಿಯಲ್ಲಿ ವಸತಿ ಯೋಜನೆಗಾಗಿ ಪದವು ಗ್ರಾಮದಲ್ಲಿ 10 ಎಕರೆ ಜಮೀನು ಮೀಸಲಿಟ್ಟು ಯೋಜನೆಯ ಡಿಪಿಆರ್ ಆಗಿತ್ತು. ಫಲಾನುಭವಿಗಳ ಆಯ್ಕೆಯೂ ನಡೆದಿತ್ತು. ಸರಕಾರದ ಸಬ್ಸಿಡಿ ಹಣ ಬ್ಯಾಂಕ್ ಸಾಲದಡಿ ಫ್ಲ್ಯಾಟ್ ನಿರ್ಮಾಣ ಮಾಡಲು ಒಟ್ಟು ೬೩ ಕೋಟಿ ರೂ. ಅಂದಾಜು ವೆಚ್ಚ ಪಟ್ಟಿ ತಯಾರು ಮಾಡಿ ಟೆಂಡರ್ ಕೂಡಾ ಆಗಿತ್ತು. ಆದರೆ ಅಲ್ಲಿ ವಸತಿ ನಿರ್ಮಾಣ ಆಗದು ಎಂದು ಅಲ್ಲಿ ಪುಕಾರು ಎಬ್ಬಿಸಿದ ಕಾರಣ ಯೋಜನೆ ನೆನೆಗುದಿಗೆ ಬಿತ್ತು. ಆದರೆ ಅಂದು ಅಲ್ಲಿ ವಸತಿ ನಿರ್ಮಾಣ ಸಾಧ್ಯ ಇಲ್ಲ ಎಂದು ಅಡ್ಡಗಾಲು ಹಾಕಿದವರೇ ಇಂದು ಸರಕಾರಕ್ಕೆ ಆಗಿನ 63 ಕೋಟಿ ರೂ.ಗಳ ಯೋಜನೆಯ ಬದಲಿಗೆ 145 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದು ಹೇಗೆ ಸಾಧ್ಯವಾಗಿದೆ ಎಂದು ಸ್ಥಳೀಯ ಶಾಸಕರ ಹೆಸರು ಪ್ರಸ್ತಾವಿಸಿ ಸದಸ್ಯ ವಿನಯರಾಜ್ ಸಭೆಯಲ್ಲಿ ಆರೋಪಿಸಿದರು. 

ಇದರಿಂದ ಅಸಮಾಧಾನಗೊಂಡ ಮಾಜಿ ಮೇಯರ್ ಸುಧೀರ್ ಶೆಟ್ಟಿ ಚುನಾವಣೆಯ ಸಂದರ್ಭದಲ್ಲಿ ಡೀಮ್ಡ್ ಫಾರೆಸ್ಟ್ ಜಾಗವನ್ನು ಬಡವರಿಗೆ ನೀಡುವ ವಾಗ್ದಾನ ಮಾಡಿ ಮೋಸ ಮಾಡಿದವರು ನಿಮ್ಮ ಶಾಸಕರು ಎಂದು ಆರೋಪಿಸಿದರು. ಆಡಳಿತ ಪಕ್ಷದ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಶಕೀಲಾ ಕಾವ ಸೇರಿದಂತೆ ಇತರರೂ ಪ್ರತಿಪಕ್ಷದ ವಿರುದ್ಧ ಮುಗಿಬಿದ್ದರು. 

ಬಿಜೆಪಿ ಆಡಳಿತದ ಪಾಲಿಕೆ ಅವಧಿಯಲ್ಲಿ ಬಡವರಿಗೆ ವಸತಿ ಶೂನ್ಯ ಎಂದು ಪ್ರತಿಪಕ್ಷದ ನಾಯಕ, ಸದಸ್ಯರು ಆರೋಪಿ ಸಿದರೆ, ಬಡವರ ಹೆಸರಿನಲ್ಲಿ ಮೋಸ ಮಾಡಿರುವುದು ನೀವು ನಿಮ್ಮ ಅಭಿವೃದ್ಧಿ ಶೂನ್ಯ ಎಂದು ಆಡಳಿತ ಪಕ್ಷದ ಸದಸ್ಯರು ಪರಸ್ಪರ ಆರೋಪ ಪ್ರತ್ಯಾರೋಪ ನಡೆಸಿದಾಗ ಕೆಲ ಹೊತ್ತು ಪಾಲಿಕೆ ಸಭಾಂಗಣ ಗೊಂದಲಕ್ಕೀಡಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article