.jpeg)
‘ಜನರ ಆಶೀರ್ವಾದ ಇದ್ದರೆ ಮೋದಿಯನ್ನು ಹಿಂದಿಕ್ಕುವ ಭಾಗ್ಯ ಸಿಗಬಹುದು’: ಯು.ಟಿ ಖಾದರ್
ಮಂಗಳೂರು: ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಒಂದೂವರೆ ವರ್ಷದಲ್ಲಿ ಯು.ಟಿ ಖಾದರ್ ಹತ್ತು ದೇಶಗಳನ್ನು ಸುತ್ತಿದ್ದಾರೆ. ಇದೀಗ ರೋಮ್ ದೇಶಕ್ಕೆ ಹೊರಟಿದ್ದು, ಅಲ್ಲಿನ ವ್ಯಾಟಿಕನ್ ಸಿಟಿಯಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.
ವ್ಯಾಟಿಕನ್‌ಗೆ ತೆರಳುವುದಕ್ಕೂ ಮುನ್ನ ನಗರದಲ್ಲಿ ಸುದ್ದಿಗೋಷ್ಟಿ ಕರೆದಿದ್ದ ಅವರಲ್ಲಿ ಪತ್ರಕರ್ತರು ಕುಹಕದ ಪ್ರಶ್ನೆಗಳನ್ನು ಹಾಕಿದರು.
ಈವರೆಗೆ ಹತ್ತು ದೇಶಗಳನ್ನು ಸುತ್ತಿದ್ದೇನೆ, ಇದೀಗ ರೋಮ್ ದೇಶಕ್ಕೆ ಹೊರಟಿದ್ದೇನೆ. ಅಲ್ಲಿನ ವ್ಯಾಟಿಕನ್ ಸಿಟಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಕರೆದಿದ್ದಾರೆ. ನಾನು ಸೇರಿದಂತೆ ಭಾರತದಿಂದ ಆಯ್ದ ಕೆಲವರನ್ನು ಮಾತ್ರ ಆಹ್ವಾನಿಸಿದ್ದಾರೆ. ಅಲ್ಲಿ ಭಾರತದ ಜನಪ್ರತಿನಿಧಿಯಾಗಿ ಮಾತನಾಡಲು ಸಿಗುವುದು ಒಂದು ಅಪೂರ್ವ ಅವಕಾಶ. ಉಳ್ಳಾಲದ ಜನತೆಯ ಪರವಾಗಿ ನಾನು ಅಲ್ಲಿ ಪ್ರತಿನಿಧಿಸುತ್ತೇನೆ ಎಂದು ಹೇಳಿದರು.
ನೀವು ದೇಶ ಸುತ್ತುವುದರಲ್ಲಿ ಮೋದಿಯವರನ್ನು ಹಿಂದಿಕುತ್ತೀರಾ ಎಂಬ ಪ್ರಶ್ನೆಗೆ, ಅವರನ್ನು ಹಿಂದಿಕ್ಕಬೇಕೆಂಬ ಬಯಕೆ ಇದೆ. ಅದಕ್ಕೆ ಉಳ್ಳಾಲದ ಜನತೆಯ ಆಶೀರ್ವಾದ ಸಿಗಬೇಕು. ಜನರ ಪ್ರಾರ್ಥನೆ ಇದ್ದರೆ ಮೋದಿಯನ್ನು ಹಿಂದಿಕ್ಕುವ ಭಾಗ್ಯ ಸಿಗಬಹುದು. ಕೆಲವೊಮ್ಮೆ ಒಂದು ಕಡೆ ಹೋದಾಗ ಮತ್ತೆ ಬರಲು ಆಗಲ್ಲ ಎಂದು ಆಸುಪಾಸಿನ ದೇಶಗಳಿಗೂ ಹೋಗುತ್ತೇನೆ, ಅಲ್ಲಿಯೇ ವಾಹನದಲ್ಲಿ ಮತ್ತೊಂದು ದೇಶಕ್ಕೆ ಹೋಗಲು ಆಗುತ್ತದೆ ಎಂದರು.
ನೀವು ಸಚಿವ ಸ್ಥಾನದ ಆಕಾಂಕ್ಷಿಯಾ ಎಂದು ಕೇಳಿದ ಪ್ರಶ್ನೆಗೆ, ನಾನು ಸ್ಪೀಕರ್ ಆದಾಗಲೇ ಹೇಳಿದ್ದೆ. ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಚೆಂಡು ಯಾವ ಕಡೆಯಿಂದ ಬಂದರೂ ಬ್ಯಾಟಿಂಗ್ ಮಾಡುತ್ತೇನೆ. ಹೊಸ ಜವಾಬ್ದಾರಿ ಸಿಕ್ಕಾಗ ಅದನ್ನು ಕಲಿತುಕೊಳ್ಳಬೇಕು ಎಂದರು.
ಸ್ಪೀಕರ್ ಆಗಿ ಸಂತೃಪ್ತಿ ಇದೆಯಾ ಎಂದು ಕೇಳಿದ್ದಕ್ಕೆ, ಸಮ್ಮಿಶ್ರ ಸರಕಾರ ಇದ್ದಾಗ ಮಾತ್ರ ಸ್ಪೀಕರ್ ಸ್ಥಾನಕ್ಕೆ ಹೆಚ್ಚು ಗೌರವ ಇರುತ್ತದೆ. ಇಲ್ಲದಿದ್ದರೆ ನಾವು ಅನುದಾನ ಇನ್ನಿತರ ವಿಚಾರಕ್ಕೆ ಸಚಿವರಿಗೆ ಎರಡು ಮೂರು ಬಾರಿ ಫೋನ್ ಮಾಡಬೇಕಾಗುತ್ತದೆ. ಸ್ಪೀಕರ್ ಅಂದ ಮೇಲೆ ಅವರ ಕ್ಷೇತ್ರಕ್ಕೆ ಇಂತಿಷ್ಟು ಅನುದಾನ ನೀಡಬೇಕು ಎಂದು ಹೇಳಿದರು.
ತುಳು ಭಾಷೆಯ ಬಗ್ಗೆ ಅಸಡ್ಡೆ..
ತುಳು ದ್ವಿತೀಯ ಭಾಷೆಯಾಗಿ ಘೋಷಣೆ ಮಾಡುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲವೇ ಎಂದು ಕೇಳಿದ್ದಕ್ಕೆ, ಆ ಕುರಿತು ಈಗಾಗಲೇ ಟೇಕಾಫ್ ಆಗಿದೆ, ಎಲ್ಲಿ ಲ್ಯಾಂಡ್ ಆಗುತ್ತದೆ ಎಂದು ಹೇಳಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದರು. ನೀವೇ ಸ್ಪೀಕರ್ ಆಗಿ, ತುಳುವರಾಗಿ ಹೀಗೆ ಹೇಳೋದಾ ಎಂದು ಮರು ಪ್ರಶ್ನಿಸಿದಾಗ, ಆ ಕುರಿತು ಪ್ರಯತ್ನ ಮಾಡುತ್ತಿದ್ದೇವೆ, ಎಲ್ಲರ ಸಹಮತ ಸಿಗಬೇಕಲ್ವಾ ಎಂದರು. ನೀವು ಈ ಭಾಗದ ಜನಪ್ರತಿನಿಧಿಗಳ ಸಭೆ ಕರೆದಿಲ್ಲ ತಾನೇ ಎಂದಿದ್ದಕ್ಕೆ ಮಾಡ್ತೀವಿ ಎಂದು ಹೇಳಿದರು. ಕಳೆದ ಬಾರಿಯ ಅಧಿವೇಶನದಲ್ಲಿ ತುಳು ಭಾಷೆಯ ಕುರಿತಾಗಿ ಪುತ್ತೂರು ಶಾಸಕ ಅಶೋಕ್ ರೈ ಪ್ರಸ್ತಾಪಿಸಿ, ದ್ವಿತೀಯ ಭಾಷೆಯಾಗಿ ಘೋಷಿಸುವ ಬಗ್ಗೆ ಒತ್ತಾಯಿಸಿದ್ದರು. ಚರ್ಚೆಯ ಸಂದರ್ಭದಲ್ಲಿ ಸ್ಪೀಕರ್ ಯುಟಿ ಖಾದರ್, ಈ ಬಗ್ಗೆ ಶೀಘ್ರದಲ್ಲೇ ಕರಾವಳಿಯ ಜನಪ್ರತಿನಿಧಿಗಳ ಸಭೆ ಕರೆಯುತ್ತೇನೆ ಎಂದಿದ್ದರು.