ರಾಜ್ಯದಲ್ಲಿ ಪಡಿತರ ನೀಡೋದಕ್ಕೆ ಹಣದ ಕೊರತೆ ಇಲ್ಲ: ಕೆ.ಎಚ್. ಮುನಿಯಪ್ಪ
ಮಂಗಳೂರು: ರಾಜ್ಯದಲ್ಲಿ ಪಡಿತರ ನೀಡೋದಕ್ಕೆ ಹಣದ ಕೊರತೆ ಇಲ್ಲ. ಪರಿಷ್ಕರಣೆಯಿಂದಾಗಿ ಬಿಪಿಎಲ್ ಅಲ್ಲದೇ ಇರುವವರನ್ನು ಎಪಿಎಲ್‌ಗೆ ಬದಲಾವಣೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಅವರು ಇಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕದಲ್ಲಿ ಗ್ಯಾರೆಂಟಿಗಳಿಗೆ ಹಣ ಹೊಂದಿಸಲು 11 ಲಕ್ಷ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ಎಪಿಎಲ್‌ಗೆ ಅರ್ಜಿ ಹಾಕಿದವರಿಗೆ ಅವರ ಕಾರ್ಡ್‌ನ್ನು ರದ್ದು ಮಾಡೋದಿಲ್ಲ. ಅರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲು ಯಾವುದೇ ತೊಂದರೆ ಇಲ್ಲ. ಎಪಿಎಲ್‌ನವರಿಗೆ ಸಬ್ಸಿಡಿ ರೇಟ್‌ನಲ್ಲಿ ರೇಷನ್ ಕೊಡ್ತಿದ್ದೆವು. ಆದರೆ ಹೆಚ್ಚಿನವರು ರೇಷನ್ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಸದ್ಯಕ್ಕೆ ಎಪಿಎಲ್‌ಗೆ ಸಬ್ಸಿಡಿ ಕೊಡೊದನ್ನು ನಿಲ್ಲಿಸಿದ್ದೇವೆ ಎಂದು ಹೇಳಿದರು.
ಪರಿಷ್ಕರಣೆ ಪೂರ್ತಿ ಆದ ಮೇಲೆ ಎಪಿಎಲ್‌ನವರು ರೇಷನ್ ಬೇಕೆಂದು ಮುಂದೆ ಬಂದರೆ ಖಂಡಿತವಾಗಿಯೂ ಕೊಡ್ತೇವೆ. ಪರಿಷ್ಕರಣೆ ಆದ ಬಳಿಕ ಎಪಿಎಲ್‌ನವರಿಗೆ ಅವಶ್ಯಕತೆ ಇದ್ದರೆ ಕೊಡುತ್ತೇವೆ. ಒಂದೇ ಒಂದು ಎಪಿಎಲ್ ಕಾರ್ಡ್ ಕೂಡ ರದ್ದು ಆಗಿಲ್ಲ. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಕರ್ನಾಟಕದಲ್ಲಿ ರೇಷನ್ ಕಾರ್ಡ್ ಇದೆ. 6.50 ಕೋಟಿ ಜನ ಇದ್ದು, 4.50 ಕೋಟಿ ಜನರಿಗೆ ರೇಷನ್ ಕಾರ್ಡ್ ಕೊಟ್ಟಿದ್ದೇವೆ. ಅರ್ಹರಲ್ಲದವರು ಜಾಸ್ತಿ ಜನ ಇದ್ದಾರೆ ಎಂಬ ಭಾವನೆ ಬಂದಿದೆ ಆದುದರಿಂದ ಪರಿಷ್ಕರಣೆಗೆ ನಿಯಾಮವಳಿ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.
ಆದಾಯ ತೆರಿಗೆ ಕಟ್ಟುವವರಿಗೆ, ಕಾರು ಇರುವವರಿಗೆಲ್ಲಾ ಎಪಿಎಲ್ ಎಂದು ಈ ಹಿಂದಿನ ಸರ್ಕಾರವೇ ಈ ನಿಯಮ ಮಾಡಿದೆ. ಅಂತವರು ಇದ್ರೆ ಅವರನ್ನು ಎಪಿಎಲ್ ಪಟ್ಟಿಗೆ ಹಾಕುತ್ತೇವೆ. ಅವರನ್ನು ತೆಗೆದು ಹಾಕಲ್ಲ. ಪರಿಷ್ಕರಣೆ ಮಾಡುವಾಗ ಅರ್ಹರಿಗೆ ಬಿಪಿಎಲ್ ಕಾರ್ಡ್ ಕೊಡುತ್ತೇವೆ. ನಮ್ಮ ಬಳಿ ಇದಕ್ಕಾಗಿ 8000 ಸಾವಿರ ಕೋಟಿ ಹಣ ಇದೆ. ತಿಂಗಳಿಗೆ 650 ಕೋಟಿಯೇ ಖರ್ಚು ಆಗಲ್ಲ. ಕೊಡೋದಕ್ಕೆ ಯಾವುದೇ ತೊಂದರೆ ಇಲ್ಲ. ಸುನೀಲ್ ಕುಮಾರ್ ಅವರಿಗೆ ಅನುಮಾನ ಇದ್ದಲ್ಲಿ ನನ್ನ ಬಳಿ ಕೇಳಿದ್ರೆ ಹೇಳುತ್ತೇನೆ ಎಂದು ಹೇಳಿದರು.