ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವ ತಿಳಿಸುವುದು ಅಗತ್ಯ: ವೇದವ್ಯಾಸ ಕಾಮತ್

ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವ ತಿಳಿಸುವುದು ಅಗತ್ಯ: ವೇದವ್ಯಾಸ ಕಾಮತ್


ಮಂಗಳೂರು: ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತ ಸಂವಿಧಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ನಿರಂತರ ಪ್ರಯತ್ನಗಳಾಗಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಅವರು ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸ್ಥಾನಮಾನ ಗೌರವವನ್ನು ನೀಡಲಾಗಿದೆ. ಸಂವಿಧಾನ ಕರ್ತರು ಭಾರತದ ನೆಲ,ಸಂಸ್ಕೃತಿ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿಗೆ ಪೂರಕವಾದ ಕಾನೂನುಗಳನ್ನು ಜಾರಿಗೆ ತರಲು ಶ್ರಮಿಸಿದ್ದಾರೆ. ವಿಶ್ವದ ಎಲ್ಲಾ ಸಂವಿಧಾನಗಳ ಸಾರವನ್ನು ಅರಿತುಕೊಂಡು, ಭಾರತದ ಸಂವಿಧಾನವನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.

ಡಾ. ಬಿ.ಆರ್ ಅಂಬೇಡ್ಕರ್ ಅವರ ಹುಟ್ಟಿದ ಸ್ಥಳ, ಅವರು ಓಡಾಡಿದ ಪರಿಸರ, ಕಲಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಅವರಿಗೆ ಸಂಬಂಧಪಟ್ಟ ಸ್ಥಳಗಳ ಅಭಿವೃದ್ಧಿಗೆ ಮತ್ತು ಅವರ  ಇತಿಹಾಸವನ್ನು ರಕ್ಷಿಸಲು ಸರಕಾರವು ಯೋಜನೆ ರೂಪಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಸಂವಿಧಾನ ಪೀಠಿಕೆ ಬೋಧಿಸಿದರು. ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ, ಶ್ರೀ ನಾರಾಯಣಗುರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ, ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕ ರಘು ಧರ್ಮಸೇನಾ ಅವರಿಂದ ಸಂವಿಧಾನ ಮಹತ್ವ ಹಾಗೂ ಸಾಗಿಬಂದ ಹಾದಿ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್ ಆನಂದ್ ಮತ್ತಿತರರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಹೇಮಲತಾ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಸರೇಶ್ ಅಡಿಗ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article