
ಸಮಾಜದ ಕಣ್ಣೀರು ಒರೆಸುವುದು ದೇವರ ಕಾರ್ಯ: ನಳಿನ್ ಕುಮಾರ್ ಕಟೀಲು
ಮಂಗಳೂರು: ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವರ ದೀಪೋತ್ಸವ ಹಿನ್ನೆಲೆಯಲ್ಲಿ ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ನೇತೃತ್ವದಲ್ಲಿ ಯಂಗ್ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಸಮಾಜಮುಖಿ ಕಾರ್ಯಕ್ರಮ ಶುಕ್ರವಾರ ರಾತ್ರಿ ನಡೆಯಿತು.
ಪಾಂಡೇಶ್ವರ ಅಶ್ವಥಕಟ್ಟೆಯ ಬಳಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಅಶಕ್ತ ಕುಟುಂಬಗಳಿಗೆ ಆರ್ಥಿಕ ಸಹಾಯ ಹಸ್ತಾಂತರಿಸಲಾಯಿತು. ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ, ವಿದ್ಯಾರ್ಥಿ ವೇತನ ಪ್ರಧಾನಿಸಲಾಯಿತು.
ಸಮಾಜ ಸೇವಕ ಈಶ್ವರ ಮಲ್ಪೆ ಹಾಗೂ ಪಿಡಬ್ಲೂಡಿ ಅಧಿಕಾರಿ ಮಿಥುನ್ ಅವರನ್ನು ಸಮ್ಮಾನಿಸಲಾಯಿತು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮದ ಮೂಲಕ ಜನಪ್ರೀತಿ ಹೇಗೆ ಗಳಿಸಬಹುದು ಎಂಬುವುದನ್ನು ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ಅವರು ತೋರಿಸಿಕೊಟ್ಟಿದ್ದಾರೆ. ಸಮಾಜದ ಹಿತ ಕಾಯುವ ಜತೆಗೆ ಸಮಾಜದ ಶ್ರೇಯಸ್ಸಿಗೆ ಸ್ಪಂದಿಸುವ ಕಾರ್ಯ ನಡೆಸಿದ್ದಾರೆ. ಎಲ್ಲರನ್ನು ಸೇರಿಸಿ ಒಗ್ಗೂಡಿಸುವ ಕಾರ್ಯ ಮಾಡಿದ್ದಾರೆ. ಕೌಶಲ್ಯ ಪ್ರತಿಭೆಗಳಿಗೆ ಯಂತ್ರ, ಆಶಕ್ತರಿಗೆ ನೆರವು, ಸಮಾಜದ ಕಣ್ಣೀರು ಒರೆಸುವ ಕಾರ್ಯ ನಡೆಸಿರುವುದು ಅಭಿನಂದನೀಯ ಎಂದು ಹೇಳಿದರು.
ಎಲ್ಲರ ಕಣ್ಣೀರು ಒರೆಸುವುದೇ ದೇವರ ಕಾರ್ಯ. ಅದನ್ನು ದಿವಾಕರ್ ಪಾಂಡೇಶ್ವರ ಅವರು ಯಂಗ್ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಮೂಲಕ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು.
ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಪಾಂಡೇಶ್ವರ ದೇವರ ದೀಪೋತ್ಸವದ ವೇಳೆ ಕಳೆದ ಹಲವು ವರ್ಷದಿಂದ ಸಮಾಜಮುಖಿ ಕಾರ್ಯವನ್ನು ದಿವಾಕರ ಪಾಂಡೇಶ್ವರ ಅವರ ನೇತೃತ್ವದಲ್ಲಿ ಕೈಗೊಳ್ಳುತ್ತಿರುವುದು ಮಾದರಿ ಕಾರ್ಯ ಎಂದು ಹೇಳಿದರು.
ಮಂಗಳೂರು ಮೇಯರ್ ಮನೋಜ್ ಕುಮಾರ್, ಉಪಮೇಯರ್ ಭಾನುಮತಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಮಂಗಳೂರು ದಕ್ಷಿಣ ಅಧ್ಯಕ್ಷ ರಮೇಶ್ ಕಂಡೆಟ್ಟು, ಉದ್ಯಮಿಗಳಾದ ಅಜಿತ್ ಚೌಟ, ರಾಜೇಶ್ ಪುನಿಯ, ಕಾರ್ಯಕ್ರಮದ ರೂವಾರಿ-ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಯಂಗ್ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಪಾಂಡೇಶ್ವರ ಮತ್ತಿತರರು ಉಪಸ್ಥಿತರಿದ್ದರು.
ಶಿವಾನಂದ ಮೆಂಡನ್ ಸ್ವಾಗತಿಸಿ, ಮಂಜುಳಾ ಶೆಟ್ಟಿ ನಿರೂಪಿಸಿದರು. ಬಳಿಕ ‘ಪಾಂಡೇಶ್ವರ ನೈಟ್-2024’ ಸಂಗೀತ, ನೃತ್ಯ ಕಾರ್ಯಕ್ರಮ ನಡೆಯಿತು.