
ಅಭಿವೃದ್ಧಿಯಲ್ಲಿ ಭರತ್ ಶೆಟ್ಟಿ ಸಾಧನೆ ಶೂನ್ಯ, ಕಳಪೆ ಕಾಮಗಾರಿ ಶಾಸಕರ ಕಾರ್ಯವೈಖರಿಗೆ ಕೈಗನ್ನಡಿ: ಬಿ.ಕೆ ಇಮ್ತಿಯಾಜ್
ಸುರತ್ಕಲ್: ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರು ಜನರನ್ನು ಭಾವನಾತ್ಮಕವಾಗಿ ವಿಭಜಿಸಿ ದ್ವೇಷ ಹರಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಅವರ ಸಾಧನೆ ಶೂನ್ಯ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಟೀಕಿಸಿದ್ದಾರೆ ಅವರು ಇಂದು ಡಿವೈಎಫ್ಐ ಕಾನ ಘಟಕ ಮತ್ತು ಆಟೋ ರಿಕ್ಷಾ ಚಾಲಕರ ಸಂಘ (ಸಿಐಟಿಯು) ನೇತೃತ್ವದಲ್ಲಿ ಕಾನ- ಎಂ ಆರ್ ಪಿ ಎಲ್ ರಸ್ತೆ ಕಾಮಗಾರಿ ಅಪೂರ್ಣ ಮತ್ತು ಕಳಪೆ ಕಾಮಗಾರಿಯನ್ನು ವಿರೋಧಿಸಿ ಕಾನ ಜಂಕ್ಷನ್ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಜನರ ಸುಧೀರ್ಘ ಹೋರಾಟದ ಬಳಿಕ ಚತುಷ್ಪಥ ರಸ್ತೆ ನಿರ್ಮಾಣಗೊಂಡಿದೆಯಾದರು ಬಿಜೆಪಿ ಕಾಂಗ್ರೆಸ್ಸಿಗರ ಕೊಡು ಕೊಳ್ಳುವಿಕೆಯ ಕಾಂಟ್ರಾಕ್ಟ್ ರಾಜಕೀಯದಿಂದ ರಸ್ತೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಕಣ್ಣಿಗೆ ರಾಚುತ್ತಿದ್ದರೂ ಶಾಸಕ ಭರತ್ ಶೆಟ್ಟಿಯವರ ಮೌನಕ್ಕೆ ಕಾರಣ ಎಂದು ಶಾಸಕರು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು. ಅವೈಜ್ಞಾನಿಕ ಕಾಮಗಾರಿಯಿಂದ ಸೂಕ್ತ ಚರಂಡಿ ವ್ಯವಸ್ಥೆಗಳಿಲ್ಲದೆ ಮಳೆ ನೀರು ಅಂಗಡಿ ಮನೆಗಳಿಗೆ ನುಗ್ಗುತ್ತಿದೆ ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿದ ಅವರು ಮತ್ತೆ ವಿಳಂಬ ಆದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ಸಿಪಿಎಂ ಸುರತ್ಕಲ್ ಶಾಖೆ ಕಾರ್ಯದರ್ಶಿ ಶ್ರೀನಾಥ್ ಕುಲಾಲ್ ಮಾತನಾಡಿ, ಸುರತ್ಕಲ್ ಮತ್ತು ರೈಲ್ವೆ ಬ್ರಿಡ್ಜ್ ಮೇಲಿನ ರಸ್ತೆ ಹದಗೆಟ್ಟು ವರ್ಷಗಳೇ ಕಳೆದರೂ ಸಮಸ್ಯೆಗೆ ಪರಿಹಾರ ಕಲ್ಪಿಸಲು ವಿಫಲರಾಗಿದ್ದಾರೆ ಕಾನ ರಸ್ತೆಯ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ದಿನನಿತ್ಯ ಅಪಘಾತಗಳು ಸಂಭವಿಸಿ ಸಾವು ನೋವಿಗೆ ಕಾರಣವಾಗುತ್ತಿದೆ ಎಂದು ಆಪಾದಿಸಿದರು.
ಡಿವೈಎಫ್ಐ ಘಟಕ ಅಧ್ಯಕ್ಷರಾದ ಬಿಕೆ ಮಕ್ಸುದ್, ಐ ಮೊಹಮ್ಮದ್, ಖಾಲಿದ್ ಕೃಷ್ಣಾಪುರ,ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಬಾವ,ಮುಖಂಡರಾದ ನವಾಜ್ ಕುಳಾಯಿ, ಸಾದಿಕ್ ಕಿಲ್ಪಾಡಿ, ಆಟೋ ರಿಕ್ಷಾ ಚಾಲಕರ ಸಂಘದ ಮುಖಂಡರಾದ ಅಬ್ದುಲ್ ಬಷೀರ್ ಕಾನ, ಮಿಥುನ್, ಹಂಝ ಮೈಂದಗುರಿ,ಇಬ್ರಾಹಿಂ, ಸಾಮಾಜಿಕ ಕಾರ್ಯಕರ್ತರಾದ ಬಿ.ಎಂ ಅಬೂಸಾಲಿ ಕೃಷ್ಣಾಪುರ,ಮೊಹಮ್ಮದ್ ಶರೀಫ್ ಕಾನ,ಫ್ರಾನ್ಸಿಸ್ ಕಾನ,ಲಾರಿ ಚಾಲಕರ ಸಂಘದ ಮುಖಂಡರಾದ ಆರಿಫ್ ಮಂಗಲಪೇಟೆ ಮುಂತಾದವರು ಉಪಸ್ಥಿತರಿದ್ದರು.