
ಕಾಂತಾರ ಚಾಪ್ಟರ್ 1 ಕಲಾವಿದರ ಬಸ್ ಪಲ್ಟಿಯಾಗಿ 6 ಮಂದಿಗೆ ಗಾಯ
ಉಡುಪಿ: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ನಟಿಸುತ್ತಿರುವ ಕಲಾವಿದರ ಬಸ್ ಭಾನುವಾರ ರಾತ್ರಿ ಕೊಲ್ಲೂರು ಸಮೀಪ ಅಪಘಾತಕ್ಕೀಡಾಗಿದೆ.
ಶೂಟಿಂಗ್ ಸಲುವಾಗಿ ಜ್ಯೂನಿಯರ್ ಕಲಾವಿದರನ್ನು ಕರೆದುಕೊಂಡು ಹೋಗಿದ್ದ ಮಿನಿ ಬಸ್ ಜಡ್ಕಲ್ ಬಳಿ ಪಲ್ಟಿಯಾಗಿ 6 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರಾವಳಿ ಭಾಗದ ವಿವಿಧೆಡೆಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಶೂಟಿಂಗ್ ನಡೆಯುತ್ತಿದ್ದು, ವಿವಿಧ ಕಲಾವಿದರು ನಟಿಸುತ್ತಿದ್ದಾರೆ. ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, 20 ಮಂದಿ ಜ್ಯೂನಿಯರ್ ಕಲಾವಿದರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.
‘ಹೊಂಬಾಳೆ ಫಿಲ್ಮ್ಸ್’ ಮೂಲಕ ವಿಜಯ್ ಕಿರಗಂದೂರು ‘ಕಾಂತಾರ: ಚಾಪ್ಟರ್-1’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಜೊತೆಗೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಡಿಬರುತ್ತಿದೆ.