
ಬುದ್ಧವಿಹಾರ ಆಡಳಿತ ಬೌದ್ಧರಿಗೆ ನೀಡಲು ಭಾರತೀಯ ಬೌದ್ಧ ಮಹಾಸಭಾ ಆಗ್ರಹ
ಉಡುಪಿ: ಬಿಹಾರದ ಬೋಧ ಗಯಾದಲ್ಲಿರುವ ಬುದ್ಧ ವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡುವಂತೆ ಒತ್ತಾಯಿಸಿ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಭಾರತೀಯ ಬೌದ್ಧ ಮಹಾಸಭಾದ ಮುಂಜುನಾಥ ವಿ. ಮಾತನಾಡಿ, ವಿದೇಶಿಯರ ದಾಳಿ ಹಾಗೂ ದೇಶದಲ್ಲಿರುವ ಇತರ ಧರ್ಮೀಯರ ದಾಳಿಯಿಂದ ಬೌದ್ಧ ಧರ್ಮ ದುರ್ಬಲವಾಯಿತು. ಸಮಾನತೆ, ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ ಈ ಧರ್ಮವನ್ನು ನಾಶಮಾಡಲು, ದುರ್ಬಲಗೊಳಿಸಲು ಹವಣಿಸಲಾಗಿತ್ತು ಎಂದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಮಾತನಾಡಿ, ವೈದಿಕ ಶಾಹಿಗಳ ಕೈಯಲ್ಲಿರುವ ಬೋಧ ಗಯಾದ ಆಡಳಿತವನ್ನು ಮರಳಿ ಬೌದ್ಧ ಧರ್ಮದವರಿಗೆ ನೀಡಬೇಕು. ಈ ವಿಚಾರವಾಗಿ ದೇಶದಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಕಾನೂನು ತೊಡಕುಗಳನ್ನು ಸರಿಪಡಿಸಿ ರಾಷ್ಟ್ರಪತಿ ಬೋಧ ಗಯಾವನ್ನು ಬೌದ್ಧ ಧರ್ಮೀಯರಿಗೆ ನೀಡಬೇಕು ಎಂದು ಆಗ್ರಹಿಸಿದರು.
ನಾವು ಹಿಂದೂಗಳ ಧಾರ್ಮಿಕ ಕೇಂದ್ರಗಳನ್ನು ಕೇಳುತ್ತಿಲ್ಲ, ಬೌದ್ಧರ ಧಾರ್ಮಿಕ ಕೇಂದ್ರವನ್ನು ಬೌದ್ಧರಿಗೆ ನೀಡಿ ಎಂದು ಕೇಳುತ್ತಿದ್ದೇವೆ ಎಂದರು.
ಮಂಜುನಾಥ ಗಿಳಿಯಾರು, ಅಜಯ್ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಮುಂದಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.