
ಒಂದಿಂಚು ಭೂಮಿ ವಕ್ಫ್ ಕಸಿದುಕೊಂಡರೆ ಹೋರಾಟ: ಶಾಸಕ ಯಶಪಾಲ್ ಸುವರ್ಣ ಎಚ್ಚರಿಕೆ
ಉಡುಪಿ: ಜಿಲ್ಲೆಯಲ್ಲಿ ಒಂದು ಇಂಚು ಭೂಮಿಯನ್ನು ವಕ್ಫ್ ವಶಪಡಿಸಿಕೊಂಡರೆ ಖಂಡಿತವಾಗಿಯೂ ಹಿಂದೂ ಸಂಘಟನೆಗಳು ಹೋರಾಟ ನಡೆಸುವುದಾಗಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಎಚ್ಚರಿಕೆ ನೀಡಿದರು.
ವಕ್ಫ್ ಹರಗಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಬುಧವಾರ ನಡೆದ ಪಾದಯಾತ್ರೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದರು.
ರಾಜ್ಯದ ವಿವಿಧೆಡೆ ಪಹಣಿ ಪತ್ರಗಳಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಿಸಿ ರೈತರು ಮತ್ತು ಮಠ, ಮಂದಿರಗಳ ಆಸ್ತಿಯನ್ನು ಕಬಳಿಸಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ. ವಕ್ಫ್‌ನ್ನು ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಷಡ್ಯಂತ್ರ ನಡೆದಿದೆ. ಈ ಕಾರ್ಯಕ್ಕೆ ನಕಲಿ ಹಿಂದೂಗಳು ಕೂಡಾ ಕಾಂಗ್ರೆಸ್ ಜೊತೆ ಸೇರಿಕೊಂಡಿದ್ದಾರೆ ಎಂದು ಯಶ್‌ಪಾಲ್ ಆರೋಪಿಸಿದರು.
ಈ ಸಮಸ್ಯೆ ಪರಿಹಾರವಾಗಿ ರೈತರಿಗೆ ನ್ಯಾಯ ದೊರಕುವ ವರೆಗೂ ಹೋರಾಟ ಮುಂದುವರಿಸುವುದಾಗಿಯೂ ಅವರು ಎಚ್ಚರಿಕೆ ನೀಡಿದರು.
ಮುಡಾ ಹಗರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ವಿವಾದವನ್ನು ಮುನ್ನೆಲೆಗೆ ತಂದಿರುವ ಬಗ್ಗೆಯೂ ಅನುಮಾನ ಕಾಡುತ್ತಿದೆ ಎಂದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಜಿಲ್ಲೆಯ ಯಾವುದೇ ಆಸ್ತಿ ವಕ್ಫ್ ಎಂದು ನಮೂದಾಗಿದ್ದರೆ ಬಿಜೆಪಿಗೆ ತಿಳಿಸಬೇಕು. ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಹೋರಾತ್ರಿ ಹೋರಾಟ ನಡೆಸಲಾಗುತ್ತದೆ ಎಂದರು.
ಅದಕ್ಕೂ ಮೊದಲು ಮಣಿಪಾಲದ ಕಾಯಿನ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪ್ರತಿಭಟನೆಯಲ್ಲಿ ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಜಿಲ್ಲಾಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಮತ್ತು ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಉದಯ ಶೆಟ್ಟಿ ಮತ್ತು ಕಿರಣ್ ಕುಮಾರ್ ಬೈಲೂರು, ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಮಾಜಿ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಮುಖರಾದ ವಿಜಯಕುಮಾರ್ ಕೊಡವೂರು, ಸತೀಶ್ ಕುಮಾರ್ ಮುಟ್ಲುಪಾಡಿ, ಜಿತೇಂದ್ರ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಶ್ಯಾಮಲಾ ಕುಂದರ್, ಶಿಲ್ಪಾ ಶೆಟ್ಟಿ, ಗೀತಾಂಜಲಿ ಸುವರ್ಣ, ರಾಜೇಶ್ ಕಾವೇರಿ ಮತ್ತಿತರರು ಭಾಗವಹಿಸಿದ್ದರು.
ಪೊಲೀಸರ ಜೊತೆ ನೂಕಾಟ ತಳ್ಳಾಟ:
ಮಣಿಪಾಲದ ಕಾಯಿನ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ವಿರುದ್ಧ ಧಿಕ್ಕಾರ ಕೂಗುತ್ತಾ ಬಂದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಗೇಟ್ ಮುಂದೆ ಪ್ರತಿಭಟನಾ ಸಭೆ ನಡೆಸಿದರು. ಅಲ್ಲಿಂದ ನೇರವಾಗಿ ಪೊಲೀಸರ ತಡೆಯನ್ನು ಭೇದಿಸಿ ಶಾಸಕರು, ನಾಯಕರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದರು. ಆ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆಯಿತು. ನಂತರ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮನವಿ ಸ್ವೀಕರಿಸಿದರು.