
ರಾಜ್ಯದಲ್ಲಿ ಜನಪರವಲ್ಲ ಮುಸಲ್ಮಾನರ ಸರ್ಕಾರ: ವಿ. ಸುನಿಲ್ ಕುಮಾರ್
ಉಡುಪಿ: ರಾಜ್ಯದಲ್ಲಿ ಜನಪರ ಸರ್ಕಾರವಿಲ್ಲ, ಬದಲಾಗಿ ಮುಸಲ್ಮಾನರ ಸರ್ಕಾರ ಇದೆ ಎಂದು ಕಾರ್ಕಳ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ‍್ಯದರ್ಶಿ ವಿ. ಸುನಿಲ್ ಕುಮಾರ್ ಆರೋಪಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಮುಸಲ್ಮಾನರ ತುಷ್ಟೀಕರಣ ಹೊಸದೇನಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಮುಸಲ್ಮಾನರ ಋಣ ತೀರಿಸಬೇಕು ಎನ್ನಿಸುತ್ತದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಓಬಿಸಿಯವರಿಗೆ ನ್ಯಾಯ ಕೊಡಬೇಕು ಎಂದು ಸಿದ್ದರಾಮಯ್ಯಗೆ ಎನಿಸುವುದಿಲ್ಲ ಎಂದು ಟೀಕಿಸಿದರು.
ಕಳೆದ ಬಾರಿ ಅಧಿಕಾರ ಪಡೆದಾಗ ಟಿಪ್ಪು ಜಯಂತಿ ಮಾಡಿ ಅದನ್ನು ವರ್ಣರಂಜಿತಗೊಳಿಸಿದರು. ವಕ್ಫ್ ಆಸ್ತಿಗೆ ಬೇಲಿ ಹಾಕಲು 350 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಎಂದು ಟಿಪ್ಪಣಿ ಬರೆದಿದ್ದಾರೆ. ಸರ್ಕಾರಿ ಕಾಮಗಾರಿಗಳಲ್ಲಿ ನಾಲ್ಕು ಪರ್ಸೆಂಟ್ ಮುಸಲ್ಮಾನ ಗುತ್ತಿಗೆದಾರರಿಗೆ ಮೀಸಲಾತಿ ನೀಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ಇದು ಸರ್ವ ಜನರ ಸರ್ಕಾರ ಅಲ್ಲ ಎಂದು ಸುನಿಲ್ ಕಿಡಿ ಕಾರಿದರು.
ಗೆಲುವು ನಮ್ಮದೇ:
ಮೂರು ಉಪಚುನಾವಣೆಗಳಲ್ಲಿ ಬಿರುಸಿನ ಮತದಾನ ನಡೆದಿದೆ. ಸಂಡೂರು ಉಪ ಚುನಾವಣೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಿದ್ದೆ. ಮೂರೂ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳು ನಿಶ್ಚಿತವಾಗಿಯೂ ಗೆಲುವು ಸಾಧಿಸುತ್ತಾರೆ. ನ. 23ರ ನಂತರ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಾರೆ. ಉಪಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಆಂತರಿಕ ಬೇಗುದಿ ಹೊರಬರುತ್ತದೆ. ಹೊಸ ಮುಖ್ಯಮಂತ್ರಿಯೊಂದಿಗೆ ಬೆಳಗಾವಿ ಅಧಿವೇಶನ ನಡೆಯುತ್ತದೆ ಎಂದು ಸುನಿಲ್ ಕುಮಾರ್ ಭವಿಷ್ಯ ನುಡಿದರು.
ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಗರಿಗೆದರಿದೆ. ಕಾಂಗ್ರೆಸ್ ನಗರ ನಕ್ಸಲರಿಗೆ ದೊಡ್ಡ ಪ್ರಮಾಣದ ಬೆಂಬಲ ನೀಡಿದೆ. ನಗರ ನಕ್ಸಲರನ್ನು ಒಟ್ಟು ಸೇರಿಸಿ ಈ ಸರ್ಕಾರ ಸಭೆ ಮಾಡುತ್ತದೆ. ಈಗ ಕಸ್ತೂರಿ ರಂಗನ್ ವಿಚಾರ ಇಟ್ಟುಕೊಂಡು ನಕ್ಸಲರು ಮತ್ತೊಮ್ಮೆ ಬೆಳಕಿಗೆ ಬಂದಿದ್ದಾರೆ. ಅದಕ್ಕೆ ಈ ಸರ್ಕಾರದ ಧೋರಣೆಗಳೇ ಕಾರಣ, ನಾಗರಿಕರು ಕಾರಣವಲ್ಲ.
ನಗರ ನಕ್ಸಲರನ್ನು ಪೋಷಿಸಲಾಗುತ್ತಿದೆ. ಕಾಡಿನ ನಕ್ಸಲರನ್ನು ಪರೋಕ್ಷವಾಗಿ ಬೆಳೆಸುವ ಕಾರ್ಯ ಅವರು ಮಾಡುತ್ತಿದ್ದಾರೆ. ಮುಂದೊಂದು ದಿನ ಬಹಳ ದೊಡ್ಡ ಅಪಾಯವಾಗಲಿದೆ. ಪ್ರಜಾಪ್ರಭುತ್ವಕ್ಕೆ ನಕ್ಸಲ್ ಚಟುವಟಿಕೆ ಮಾರಕ ಎಂದರು.
ವಿಜಯೇಂದ್ರ ನಾಯಕತ್ವದಲ್ಲಿ ನಮಗೇನೂ ಅಭ್ಯಂತರ ಇಲ್ಲ. ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಎಲ್ಲಾ ಸಂಘಟನೆ ಮಾಡುತ್ತೇವೆ. ನಮಗೆ ಅಧ್ಯಕ್ಷರೇ ಸುಪ್ರೀಂ. ರಾಷ್ಟ್ರೀಯ ನಾಯಕತ್ವ ಯಾರನ್ನು ಅಧ್ಯಕ್ಷ ಮಾಡುತ್ತದೆಯೀ ಎಲ್ಲರೂ ಒಪ್ಪಿಕೊಂಡು ಕೆಲಸ ಮಾಡುತ್ತೇವೆ. ಸಣ್ಣಪುಟ್ಟ ಅಭಿಪ್ರಾಯ ಭೇದ ಇದ್ದರೆ ಸರಿ ಮಾಡಿಕೊಳ್ಳಬೇಕು. ಇದು ಕೆಲವೊಮ್ಮೆ ಬಹಿರಂಗ ಆಗಿದೆ, ಇಲ್ಲ ಎನ್ನುವುದಿಲ್ಲ. ಅದನ್ನು ಸರಿ ಮಾಡುವ ಕೆಲಸ ನಮ್ಮ ನಾಯಕರು ಮಾಡುತ್ತಾರೆ ಎಂದು ಸುನೀಲ್ ಕುಮಾರ್ ಹೇಳಿದರು.