
ವ್ಯಸನಮುಕ್ತರಾಗಲು ದೇವರ ಪ್ರಾರ್ಥನೆಯೊಂದಿಗೆ ಪ್ರಯತ್ನ ಅಗತ್ಯ: ಡಾ. ಡಿ. ವೀರೇಂದ್ರ ಹೆಗ್ಗಡೆ
Monday, November 25, 2024
ಉಜಿರೆ: ಮಾತು ಮುತ್ತು. ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು ಎಂಬ ಮಾತಿನಂತೆ ಮಾತಿನಿಂದಲೇ ಬದಲಾವಣೆ ಸಾಧ್ಯ. ಮನಸ್ಸನ್ನು ಚಂಚಲ ಮಾಡಿ ಬೇರೆ ವ್ಯವಸ್ಥೆಗೆ ಬಳಕೆ ಮಾಡುವವರು ಗೆಳೆಯರಲ್ಲ. ಅವರು ಶತ್ರುಗಳು. ಮಾತಿನಲ್ಲಿ ಮೋಡಿ ಮಾಡುವವನ್ನು ನಂಬಬೇಡಿ. ಸುಖ ಗೆಳೆಯರಲ್ಲಿ ಇಲ್ಲ. ಸುಖ ಸಂಸಾರದಲ್ಲಿದೆ. ಹಾಗಾಗಿ ಸಂಸಾರದ ಜೊತೆ ಇರುವುದು ಬಹಳ ಮುಖ್ಯ. ನೆಮ್ಮದಿ ಇರುವುದು ಸಂಸಾರದ ಜೊತೆ. ಹೊರತು ದುಶ್ಚಟ, ದುರಾಭ್ಯಾಸದಲ್ಲಿ ಅಲ್ಲ. ದೇವರ ಪ್ರಾರ್ಥನೆ ಮತ್ತು ಕೌಟುಂಬಿಕ ಸಂಬಂಧದಿಂದ ಸದೃಢವಾದ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ 236ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಆಗಮಿಸಿದ 68 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಗಂಗಾಧರ ರೈ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಡಿ.ಎ. ರಹಿಮಾನ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಸ್, ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ, ರಮೇಶ್, ಆರೋಗ್ಯ ಸಹಾಯಕಿ ಸೌಮ್ಯ ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ಡಿ.9 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.