
2 ದಿನದಲ್ಲಿ 81 ದೂರು ಇತ್ಯರ್ಥ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ
ಮಂಗಳೂರು: ಮಂಗಳೂರಿನಲ್ಲಿ ಕಳೆದ ಎರಡು ದಿನಗಳ ಕಾಲ ನಡೆದ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆ ವಿಚಾರಣೆಯಲ್ಲಿ ಒಟ್ಟು 198 ದೂರು ಸ್ವೀಕರಿಸಲಾಗಿದ್ದು, 81 ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ. ಇದು ಲೋಕಾಯುಕ್ತ ವಿಚಾರಣೆಯಲ್ಲಿ ಮೂರನೇ ದೊಡ್ಡ ವಿಲೇವಾರಿಯಾಗಿದೆ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.
ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಅಧಿಕಾರಿಗಳ ಮೇಲೆ ಯಾವುದೇ ಆರೋಪ ಕೇಳಿಬಂದರೆ, ಅವರ ವಿರುದ್ಧವೂ ಸ್ವಯಂ ಪ್ರೇರಿತ ಕೇಸು ದಾಖಲಿಸಿ ತನಿಖೆ ನಡೆಸಲಾಗುವುದು ಎಂದರು.
ನಿರ್ದಿಷ್ಟ ಆರೋಪಕ್ಕೆ ಸಂಬಂಧಿಸಿ ಐದಾರು ಮಂದಿ ಲೋಕಾಯುಕ್ತ ಅಧಿಕಾರಗಳ ವಿರುದ್ಧ ಈ ಹಿಂದೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಅಧಿಕಾರಿಗಳು ಎಂದು ಕರೆಸಿಕೊಳ್ಳುವ ಎಲ್ಲ ವಿಭಾಗಗಳ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಲೋಕಾಯುಕ್ತರಿಗೆ ಇದೆ. ಅದೇ ರೀತಿ ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಆರೋಪಗಳು ಕೇಳಿಬಂದರೆ, ಮೇಲಧಿಕಾರಿಗಳ ಗಮನಕ್ಕೆ ತಂದು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿದ್ದು, ಸರ್ಕಾರದ ಮುಲಾಜು ಇಲ್ಲದೆ ನೇರವಾಗಿ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ. ಜನರ ಸಮಸ್ಯೆ ಇತ್ಯರ್ಥಪಡಿಸುದೇ ಲೋಕಾಯುಕ್ತದ ಆದ್ಯತೆ ಎಂದರು.
ಎಲ್ಲ ಕಾನೂನಿಗೆ ತಿದ್ದುಪಡಿ ಅವಶ್ಯ:
ಲೋಕಾಯುಕ್ತ ಸಹಿತ ಎಲ್ಲ ಕಾನೂನುಗಳಿಗೆ ತಿದ್ದುಪಡಿಯ ಅವಶ್ಯಕತೆ ಇದೆ. ಪ್ರಸಕ್ತ ಇರುವ ಕಾನೂನಿನಡಿ ತ್ವರಿತವಾಗಿ ನ್ಯಾಯ ನೀಡಲು ಸಾಧ್ಯವಾಗುತ್ತಲ್ಲ. ಈಗ ಇರುವ ಕಾನೂನಿನ ಅಂಶಗಳು, ವಿಚಾರಣೆಯ ಪ್ರಕ್ರಿಯೆಯಗಳು ವಿಳಂಬಗತಿಗೆ ಕಾರಣವಾಗುತ್ತಿದೆ. ವಿಚಾರಣಾ ಪ್ರಕ್ರಿಯೆಯಲ್ಲಿನ ಕೆಲವೊಂದು ಲೋಪಗಳಿಂದಾಗಿ ಆರೋಪಿ ಸುಲಭದಲ್ಲಿ ಜಾಮೀನು ಪಡೆದುಕೊಳ್ಳುವಂತಾಗುತ್ತದೆ. ಜನರಿಗೆ ಕಾನೂನು ಗೊತ್ತಿದೆ, ಆದರೆ ಕಾನೂನಿನ ಭಯ ಇಲ್ಲ. ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿಗೆ ತಂದರೂ ಅದರ ಅರಿವು ಇನ್ನಷ್ಟೆ ಆಗಬೇಕಾಗಿದೆ. ಕಾನೂನಿನಡಿ ವಿಚಾರಣೆ ನಡೆದು ಬೇಗನೆ ಶಿಕ್ಷೆಯಾಗಬೇಕಾದರೆ ಲೋಕಾಯುಕ್ತ ಸಹಿತ ಎಲ್ಲ ಕಾನೂನಿಗೆ ಸೂಕ್ತ ತಿದ್ದು ಪಡಿಯ ಅಗತ್ಯತೆ ಇದೆ ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್, ನಗರ ಪೊಲೀಸ್ ಕಮಿಷನರ್ ಅನುಪಮ ಅಗರ್‌ವಾಲ್, ಲೋಕಾಯುಕ್ತ ಉಪ ನಿಬಂಧಕರಾದ ರಾಜಶೇಖರ್, ಬಸವರಾಜಪ್ಪ, ಅರವಿಂದ, ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ, ಲೋಕಾಯುಕ್ತ ದ.ಕ. ಎಸ್ಪಿ ನಟರಾಜ್ ಮತ್ತಿತರರಿದ್ದರು.