
ಸ್ವಯಂ ಪ್ರೇರಿತ ದೂರು ದಾಖಲು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ
ಮಂಗಳೂರು: ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ತೆರಳಿ 90 ಟನ್ ಪೈಕಿ 10 ಟನ್ ಮಾತ್ರ ಕಸ ವಿಲೇವಾರಿಯಾಗಿರುವುದು ಗಮನಕ್ಕೆ ಬಂದಿತ್ತು. ಉಳಿದ ಕಸ ವಿಲೇವಾರಿಗೆ ಮಾಡದ ಕಾರಣ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ. ಅಲ್ಲದೆ ಅಲ್ಲಿನ ನೀರು, ಹಾಲು, ವಸತಿಗಳಲ್ಲಿ ಕಲುಷಿತ ಸಮಸ್ಯೆ ಬಗ್ಗೆ ಪರಿಶೀಲ ನೆ ನಡೆಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.
ಅವರು ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶಿರಾಡಿಗೆ ಆಂಬುಲೆನ್ಸ್:
ರಾಷ್ಟ್ರೀಯ ಹೆದ್ದಾರಿ 76 ಹಾದುಹೋಗುವ ಶಿರಾಡಿ ಘಾಟ್‌ನಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಲೋಕಾಯುಕ್ತಗೆ ಬೇಡಿಕೆ ಸಲ್ಲಿಸಿದ್ದರು. ಈ ಬಗ್ಗೆ ಸೋಮವಾರ ವಿಚಾರಣೆ ವೇಳೆ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಸೌಲಭ್ಯ ಒದಗಿಸುವಂತೆ ಸೂಚನೆ ನೀಡಿದ್ದೆ. ಕೇವಲ ಅರ್ಧ ಗಂಟೆಯಲ್ಲೇ ಜಿಲ್ಲಾ ಆರೋಗ್ಯ ಇಲಾಖೆ ಆ?ಯಂಬುಲೆನ್ಸ್ ಸೌಲಭ್ಯ ಕಲ್ಪಿಸಿದೆ ಎಂದರು.
ನಗರದ ಪಿವಿಎಸ್‌ನಲ್ಲಿರುವ ಕುದ್ಮಲ್ ರಂಗರಾವ್ ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲಿದ್ದ ಓದುವ ಕೊಠಡಿ ಸಮಸ್ಯೆಯನ್ನು ನಿವಾರಿಸಲಾಗಿದೆ. ಉಟೋಪಚಾರದಲ್ಲಿ ತಾರತಮ್ಯ ಎಸಗದಂತೆ ಸೂಚನೆ ನೀಡಲಾಗಿದೆ. ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದಲ್ಲಿ ದೇಶಭಕ್ತಿ ಹಾಗೂ ಭ್ರಷ್ಟಾಚಾರ ಜಾಗೃತಿ ಬಗ್ಗೆ ತಿಳಿವಳಿಕೆ ನೀಡಲಾಗಿದೆ. ಹಳೆಯಂಗಡಿ ಗ್ರಾಮ ಪಂಚಾಯ್ತಿಯಲ್ಲಿ ಕಡತ ವಿಲೇವಾರಿ ವಿಳಂಬ ಬಗ್ಗೆ ಕೇಸು ದಾಖಲಿಸಲಾಗಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ದೂರು ನೀಡುವ ಕುರಿತಂತೆ ಮಾಹಿತಿ ಫಲಕ ಅಳವಡಿಕೆಗೆ ಸೂಚನೆ ನೀಡಲಾಗಿದೆ. ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹೊರಗಿನಿಂದ ಔಷಧಕ್ಕೆ ಚೀಟಿ ನೀಡದಂತೆ ತಾಕೀತು ಮಾಡಲಾಗಿದ್ದು, ಪ್ರತಿ ತಿಂಗಳು 25 ಸಾವಿರ ರು. ಮೊತ್ತ ನೀಡುವಂತೆ ಜಿಲ್ಲಾ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿತ್ತು. ಅವರು ಎರಡೇ ಗಂಟೆಯಲ್ಲಿ ಮೊತ್ತ ಬಿಡುಗಡೆ ಮಾಡಿದ್ದಾರೆ ಎಂದರು.
ಮಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದು, ಅಲ್ಲಿರುವ ಕೈದಿಗಳ ಜೊತೆ ಮಾತನಾಡಿದ್ದೇನೆ. ಅದನ್ನು ಜೈಲು ಎಂದು ಕೆಟ್ಟದಾಗಿ ಯೋಚಿಸದೆ ಪರಿವರ್ತನಾ ಮಂದಿರ ಎಂದು ಭಾವಿಸಬೇಕು ಎಂದರು.
ನಿಡ್ಡೋಡಿಯ ಕಲ್ಲು ಕ್ವಾರಿಗೆ ಭೇಟಿ ನೀಡಿದ್ದು, ಆ ವೇಳೆ ಪರಾರಿಯಾದ ಹಿಟಾಚಿ, ಜೆಸಿಬಿ ಮತ್ತಿತರ ಪರಿಕರಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಕ್ವಾರಿಗೆ ಇರುವ ಅನುಮತಿ ಪತ್ರ ಪರಿಶೀಲಿಸಿ ನಿಯಮ ಉಲ್ಲಂಘಿಸಿರುವಲ್ಲಿ ಕ್ರಮ ವಹಿಸುವಂತೆ ಗಣಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.