
ಡಿ.31 ರಿಂದ 88 ದಿನಗಳ ಕಾಲ ರಾಜ್ಯಾದ್ಯಂತ ನಂದಿ ರಥಯಾತ್ರೆ
ಮಂಗಳೂರು: ಗೋ ಸಾವಾ ಗತಿವಿಧಿ ಕರ್ನಾಟಕ, ರಾಧ ಸುರಭಿ ಗೋಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಬವತಿಯಿಂದ 3ನೇ ವರ್ಷದ ರಾಜ್ಯಾದ್ಯಂತ ನಂದಿ ರಥಯಾತ್ರೆ ಡಿ.31 ರಿಂದ 88 ದಿನಗಳ ಕಾಲ ನಡೆಯಲಿದೆ ಎಂದು ಗೋಸೇವಾ ಗತಿವಿಧಿಯ ದಕ್ಷಿಣ ಪ್ರಾಂತ ಗೋ-ಸೇವಾ ಸಂಚಾಲಕ್ ಪ್ರವೀಣ್ ಸರಳಾಯ ಹೇಳಿದರು.
ಅವರು ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಮೊದಲ ವರ್ಷ ಏಳು ದಿನಗಳ ಕಾಲ ನಡೆದ ರಥಯಾತ್ರೆ, ಎರಡನೇ ವರ್ಷಕ್ಕೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಿಗೆ 48 ದಿನಗಳ ಕಾಲ ರಥ ಸಂಚರಿಸಿತು. ಈ ವರ್ಷ ರಾಜ್ಯಾದ್ಯಂತ 88 ದಿನಗಳ ಕಾಲ ರಥಯಾತ್ರೆ ನಡೆಯಲಿದೆ ಎಂದರು.
ಡಿ.30 ರಂದು ರಾಧಸುರಭಿ ಗೋಮಂದಿರದಲ್ಲಿ ಗೋ ಸೇವಾ ಗತಿವಿಧಿಯ ಅಖಿಲ ಭಾರತ ಟೋಳಿ ಸದಸ್ಯ ಶಂಕರಲಾಲ್ ಜಿ. ಉದ್ಘಾಟಿಸಲಿದ್ದಾರೆ. ಡಿ.31 ರಂದು ನಂದಿ ರಥಯಾತ್ರೆಗೆ ಪೊಳಲಿಯ ರಾಧಸುರಭಿ ಗೋಮಂದಿರದಲ್ಲಿ ಚಾಲನೆ ನೀಡಲಾವುದು. ಜ.22 ರಂದು ರಾಮ ಮಂದಿರ ನಿರ್ಮಾಣದ ವಾರ್ಷಿಕೋತ್ಸವದಂದು ದೀಪೋತ್ಸವ ಜ.27 ರಂದು ಚಿಕ್ಕಬಳ್ಳಾಪುದದ ಮುದ್ದೇನಹಳ್ಳಿಯ ನಂದಿಬೆಟ್ಟದಲ್ಲಿ ನಂದಿ ಉತ್ಸವ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ದೀಪೋತ್ಸವ ನಡೆಯಲಿದೆ. ಜ.29 ರಂದು ಮಂಗಳೂರಿನಲ್ಲಿ ನಂದಿ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಈ ರಥಯಾತ್ರೆಯಲ್ಲಿ 1,11,108 ವಿಷ್ಣು ಸಹಸ್ರ ನಾಮ ಪಾರಾಯಣ, ಪ್ರತಿ ದಿನ ಸಂಜೆ 4 ಗಂಟೆಯಿಂದ 8 ಗಂಟೆಯ ತನಕ ನಂದಿ ಪೂಜೆ, 1 ಕೋಟಿ ಗೋಮಯ ಹಣತೆ ಉರಿಸುವುದು, 20 ಲಕ್ಷ ಗೋಮಯ ಕಿಟ್ ವಿತರಿಸುವುದು ಹಾಗೂ 1 ಲಕ್ಷ ನಂದಿ ಪೂಜೆ ನಡೆಸುವ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದ ಅವರು ಈ ಬಾರಿ 1 ಸಾವಿರ ಮನೆಗೆ 1 ಗಂಡು ಹಾಗೂ 1 ಹೆಣ್ಣು ಗೋವನ್ನು ಮನೆಗಳಿಗೆ ಗೋವನ್ನು ದಾನವಾಗಿ ನೀಡಲಾಗುವುದು ಅವರು ಬೇಕಾದಲ್ಲಿ ಮುಂದುವರಿಸಬಹುದು ಇಲ್ಲವಾದಲ್ಲಿ ಬೇರೆ ಮನೆಗೆ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಭಕ್ತಭೂಷಣ್ ದಾಸ್, ಅನಿಲ್ ಪಂಡಿತ್, ಜಿತೇಂದ್ರ ಪ್ರತಾಪ್ ನಗರ, ನವೀನ್ ಮಾರ್ಲಾ, ಅಕ್ಷಯ್ ಇನೋಳಿ, ಗಂಗಾಧರ ಪೆರ್ಮಂಕಿ ಉಪಸ್ಥಿತರಿದ್ದರು.