ದತ್ತಪೀಠ: ಇಸ್ಲಾಂ ಚಟುವಟಿಕೆಗೆ ಅವಕಾಶ ಬೇಡ
ಮಂಗಳೂರು: ದತ್ತಪೀಠ ಹಿಂದುಗಳ ಶ್ರದ್ಧಾಕೇಂದ್ರವಾಗಿದ್ದು, ಅಲ್ಲಿ ವೈದಿಕ ವಿಧಿವಿಧಾನದಂತೆ ನಿತ್ಯವೂ ತ್ರಿಕಾಲ ಪೂಜೆ ನಡೆಯುತ್ತಿದೆ. ಈ ಕ್ಷೇತ್ರವನ್ನು ಹಿಂದುಗಳ ಸುಪರ್ದಿಗೆ ಬಿಟ್ಟುಕೊಡಬೇಕು. ದತ್ತಪೀಠದಲ್ಲಿ ಯಾವುದೇ ಇಸ್ಲಾಂ ಚಟುವಟಿಕೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ವತಿಯಿಂದ ಡಿ.12 ರಿಂದ 14ರ ವರೆಗೆ ಚಿಕ್ಕಮಗಳೂರಿನ ದತ್ತಪೀಠದಲ್ಲಿ ದತ್ತ ಜಯಂತಿ ಉತ್ಸವ ನಡೆಯಲಿದೆ.
ನಗರದ ವಿಹಿಂಪ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ ಮಾತನಾಡಿ, ಡಿ.12ರಂದು ಅನಸೂಯದೇವಿ ಪೂಜೆ ಅಂಗವಾಗಿ ಬೆಳಗ್ಗೆ 9.30ರಿಂದ ಮಹಿಳೆಯರಿಂದ ಸಂಕೀರ್ತನ ಯಾತ್ರೆ, ಶ್ರೀದತ್ತಪೀಠ ದರ್ಶನ ನಡೆಯಲಿದೆ. ದತ್ತಪೀಠದಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ. ಡಿ.13ರಂದು ಮಧ್ಯಾಹ್ನ ಚಿಕ್ಕಮಗಳೂರು ನಗರದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸುವ ದತ್ತಮಾಲಾಧಾರಿಗಳ ಬೃಹತ್ ಶೋಭಾಯಾತ್ರೆ, ಧಾರ್ಮಿಕ ಸಭೆ ನಡೆಯಲಿದೆ. ಡಿ.14ರಂದು ದತ್ತಪೀಠದಲ್ಲಿ ಹೋಮ ಮತ್ತು ಪೂಜಾ ಕೈಂಕರ್ಯ, ದತ್ತಪೀಠ ದರ್ಶನ ನಡೆಯಲಿದೆ ಎಂದರು.
ಶ್ರೀಗುರು ದತ್ತಾತ್ರೇಯ ಪೀಠ ಮತ್ತು ಪರಿಸರವನ್ನು ಹಿಂದುಗಳ ಪುಣ್ಯಕ್ಷೇತ್ರ ಎಂದು ಘೋಷಿಸಬೇಕು. ಅದರ ಸಂಪೂರ್ಣ ರಕ್ಷಣೆಯಾಗಬೇಕು. ದತ್ತಪೀಠದಲ್ಲಿ ಇಸ್ಲಾಂನ ಯಾವುದೇ ಚಟುವಟಿಕೆಗೆ ಅವಕಾಶ ನೀಡಬಾರದು. ಇಸ್ಲಾಂ ವಿಧಾನಗಳು ಮತ್ತು ಗೋರಿಗಳನ್ನು ನಾಗೇನಹಳ್ಳಿಯ ಮೂಲ ಬಾಬಾಬುಡನ್ ದರ್ಗಾಗೆ ವರ್ಗಾಯಿಸಬೇಕು. ದತ್ತಪೀಠದಲ್ಲಿದ್ದ ಅಮೂಲ್ಯ ವಿಗ್ರಹಗಳ ಅತಿಕ್ರಮಣ, ಕಾಣೆಯಾಗಿರುವ ಕಾಣಿಕೆ ವಸ್ತುಗಳು ಮತ್ತು ಆಸ್ತಿಪಾಸ್ತಿ ಅಕ್ರಮ ಹಸ್ತಾಂತರ ಹಾಗೂ ಮಾರಾಟವಾದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅವುಗಳ ಪುನರ್ ಪ್ರತಿಷ್ಠಾಪಿಸಬೇಕು. ಬ್ಯಾರಿಕೇಡ್ ಮುಕ್ತವಾಗಿ ದತ್ತಪೀಠ ದರ್ಶನಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ದತ್ತಮಾಲಾ ಅಭಿಯಾನಕ್ಕೆ ಮಂಗಳೂರಿನಿಂದ 3,500 ಮಂದಿ ದತ್ತಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ಮಂಗಳೂರಿನ ಪ್ರತಿ ತಾಲೂಕಿನಲ್ಲಿ ನಗರ ಸಂಕೀರ್ತನೆ ನಡೆಸಿ ಚಿಕ್ಕಮಗಳೂರಿಗೆ ತೆರಳಲಿದ್ದಾರೆ ಎಂದರು.
ವಿಭಾಗ ಸಂಯೋಜಕ ಪುನೀತ್ ಅತ್ತಾವರ, ಮಂಗಳೂರು ಜಿಲ್ಲಾ ಸಂಯೋಜಕ್ ನವೀನ್ ಮೂಡುಶೆಡ್ಡೆ, ಪುತ್ತೂರು ಜಿಲ್ಲಾ ಸಂಯೋಜಕ ಭರತ್ ಕುಮುಡೇಲು, ಉಡುಪಿ ಜಿಲ್ಲಾ ಸಂಯೋಜಕ್ ಚೇತನ್ ಪೇರಲ್ಕೆ ಉಪಸ್ಥಿತರಿದ್ದರು.