
ಪಿಲಿಕುಳ ನಿಸರ್ಗಧಾಮದ ಕಾಯಕಲ್ಪಕ್ಕೆ ಮನವಿ: ಸಚಿವರಿಂದ ಕಾಯಕಲ್ಪಕ್ಕೆ ಸೂಚನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವಾಮಂಜೂರಿನಲ್ಲಿರುವ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವನ್ನು ಸೂಕ್ತ ನೀತಿ ನಿರೂಪಣೆ ಮೂಲಕ ತಿದ್ದುಪಡಿ ಮಾಡಿ ಪಿಲಿಕುಳ ಅಭಿವೃದ್ಧಿ ಮಂಡಳಿಯನ್ನಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಪಿಲಿಕುಳ ನಿಸರ್ಗಧಾಮವನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸುವ ಬಗ್ಗೆ ಕರ್ನಾಟಕ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಕರ್ನಾಟಕದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ಹಾಗೆಯೇ ಅಲ್ಲಿರುವ ಪ್ರಾಣಿ ಸಂಗ್ರಹಾಲಯವನ್ನು ಝೂ ಅಥಾರಿಟಿ ಆಫ್ ಕರ್ನಾಟಕದೊಂದಿಗೆ ವಿಲೀನಗೊಳಿಸಿ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಾಣಿಗಳನ್ನು ವಿನಿಮಯ ಮಾಡಿಕೊಳ್ಳುವುದರ ಮೂಲಕ ಒಂದು ಅಂತರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸುವ ಬಗ್ಗೆ ಪಿಲಿಕುಳ ನಿಸರ್ಗಧಾಮಕ್ಕೆ ಕಾಯಕಲ್ಪ ಒದಗಿಸುವಂತೆ ಕೇಳಿಕೊಂಡಿದ್ದಾರೆ.
ಮಂಜುನಾಥ ಭಂಡಾರಿ ಅವರು ಪಿಲಿಕುಳ ನಿಸರ್ಗಧಾಮಕ್ಕೆ ಅಗತ್ಯ ಕಾಯಕಲ್ಪ ನೀಡುವ ಕುರಿತು ನೀಡಿರುವ ಸಲಹೆಗಳನ್ನು ಪರಿಗಣಿಸಿ ಸೂಕ್ತ ಕ್ರಮವಹಿಸುವಂತೆ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್‌ರವರೂ ಸಚಿವ ಎನ್.ಎಸ್. ಬೋಸರಾಜು ಅವರನ್ನು ಕೇಳಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿ ಸಚಿವರು ಪಿಲಿಕುಳ ನಿಸರ್ಗಧಾಮಕ್ಕೆ ಅಗತ್ಯ ಕಾಯಕಲ್ಪ ನೀಡುವ ಕುರಿತು ಇಲಾಖಾ ಕಾರ್ಯದರ್ಶಿಗೆ ಅಗತ್ಯ ಕ್ರಮವಹಿಸುವಂತೆ ಸೂಚಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.