
ಕದ್ರಿ ಪಾರ್ಕ್‌ನಲ್ಲಿ ‘ಕಲಾ ಪರ್ಬ’: ದಿನೇಶ್ ಹೊಳ್ಳ
ಮಂಗಳೂರು: ಶರ ಪ್ರತಿಷ್ಠಾನ ಮಂಗಳೂರು ವತಿಯಿಂದ ಅಸ್ತ್ರ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕರಾವಳಿ ಉತ್ಸವದ ಸಹಯೋಗದೊಂದಿಗೆ ಜ.11 ಮತ್ತು 12 ರಂದು ಮಂಗಳೂರಿನ ಕದ್ರಿಪಾರ್ಕ್‌ನಲ್ಲಿ ‘ಕಲಾ ಪರ್ಬ’ ಎಂಬ ಚಿತ್ರ, ನೃತ್ಯ, ಶಿಲ್ಪ ಮೇಳ ಆಯೋಜಿಸಲಾಗುತ್ತಿದೆ ಎಂದು ಚಿತ್ರಕಲಾವಿದ ದಿನೇಶ್ ಹೊಳ್ಳ ತಿಳಿಸಿದರು.
ಕಲಾ ಮೇಳದಲ್ಲಿ ಸುಮಾರು 150 ಕಲಾ ಮಳಿಗೆಗಳಲ್ಲಿ ಕಲಾವಿದರು ತಮ್ಮ ಕಲಾಕೃತಿಗಳ ಪ್ರದರ್ಶನವನ್ನು ಮಾಡಲಿದ್ದಾರೆ. ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಿತ ಕಾರ್ಕಳದ ಸಿ.ಇ. ಕಾಮತ್ ಇನ್ಸ್ಟಿಟ್ಯೂಟ ಆಫ್ ಆರ್ಟಿಸನ್ ಅವರಿಂದ ಶಿಲ್ಪ ಕಲಾ ಪ್ರಾತ್ಯಕ್ಷಿಕೆ, ನಂದಗೋಕುಲ ಕಲಾ ತಂಡ, ಭರತಾಂಜಲಿ ನೃತ್ಯ ತಂಡ, ನೃತ್ಯಾಂಗನ ತಂಡ, ಗಾನ ನೃತ್ಯ ಅಕಾಡೆಮಿಯವರಿಂದ 2 ದಿನವೂ ನೃತ್ಯ, ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜ.11ರಂದು ಮಧ್ಯಾಹ್ನ 2ಕ್ಕೆ 2ರಿಂದ 10 ನೇ ತರಗತಿಯ ಮಕ್ಕಳಿಗೆ 3 ವಿಭಾಗಗಳಲ್ಲಿ ಚಿತ್ರ ಕಲಾ ಸ್ಪರ್ಧೆ ಜರುಗಲಿದೆ. 2ರಿಂದ 4 ನೇ ತರಗತಿಯ ಮಕ್ಕಳಿಗೆ ಸೂರ್ಯೋದಯ ಚಿತ್ರ ರಚನೆ, 4 ರಿಂದ 7 ತರಗತಿಯ ಮಕ್ಕಳಿಗೆ ನೀವು ಕಂಡ ವನ್ಯ ಜೀವಿ ಚಿತ್ರ ರಚನೆ, 8 ರಿಂದ 10 ನೇ ತರಗತಿಯ ಮಕ್ಕಳಿಗೆ ತುಳುನಾಡಿನ ಸಂಸ್ಕೃತಿ, ಪ್ರಕೃತಿ, ಪದ್ಧತಿಯ ಬಗ್ಗೆ ಚಿತ್ರ ರಚನೆಗೆ ವಿಷಯವನ್ನು ನೀಡಲಾಗಿದೆ. ಭಾಗವಹಿಸಿದ ಎಲ್ಲ ಮಕ್ಕಳಿಗೂ ಅಭಿನಂದನಾ ಪತ್ರ, ಐಸ್ ಕ್ರೀಮ ಕೂಪನ್ಗಳನ್ನು ನೀಡಲಾಗುತ್ತದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುತ್ತದೆ. ಜತೆಗೆ ಛಾಯಾ ಚಿತ್ರ ಪ್ರದರ್ಶನ, ಸ್ಥಳದ ಭಾವಚಿತ್ರ ರಚನೆ, ವ್ಯಂಗ್ಯ ಚಿತ್ರ ರಚನೆ, ಮೇಕ್ ಅಪ್, ಮೆಹಂದಿ ಸ್ಪರ್ಧೆ, ಯೋಗ ತರಬೇತಿ, ಪ್ರತಿಷ್ಠಾಪನಾ ಕಲಾ ಪ್ರದರ್ಶನ ಕಲಾ ಪರ್ಬದಲ್ಲಿ ಇರಲಿದೆ ಎಂದರು.
ಪ್ರಸಾದ್ ಆರ್ಟ್ ಗ್ಯಾಲರಿ ಕೋಟಿ ಪ್ರಸಾದ್ ಆಳ್ವ, ಯೋಗಗುರು ಜಗದೀಶ್ ಶೆಟ್ಟಿ ಬಿಜೈ, ಶರ ಪ್ರತಿಷ್ಠಾನ ಕಾರ್ಯದರ್ಶಿ ಪುನೀಕ್ ಶೆಟ್ಟಿ ಉಪಸ್ಥಿತರಿದ್ದರು.