
ಉತ್ತಮ ಭವಿಷ್ಯಕ್ಕೆ ಜ್ಞಾನ ಕೇಂದ್ರಿತ ಅಂಕಗಳು ಅತ್ಯಗತ್ಯ: ಪೊನ್ನುರಾಜ್
ಮಂಗಳೂರು: ಓದಿನಿಂದ ಗಳಿಸಿದ ಜ್ಞಾನ ಮತ್ತು ಪರೀಕ್ಷೆಯಲ್ಲಿ ಪಡೆದ ಅಂಕಗಳು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಶಿಕ್ಷಣದ ಮೂಲಕ ಅತ್ಯುತ್ತಮ ಜ್ಞಾನ ಸಂಪಾದನೆಯು ವಿದ್ಯಾರ್ಥಿ ಜೀವನದ ಮುಖ್ಯ ಗುರಿಯಾಗಿರಬೇಕು ಎಂದು ಮನಿಲಾದ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರರಾದ ಪೊನ್ನುರಾಜ್ ಹೇಳಿದರು.
ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ವಳಚ್ಚಿಲ್ ಕ್ಯಾಂಪಸ್ಸಿನಲ್ಲಿ 39ನೇ ಎಕ್ಸ್‌ಪರ್ಟ್ ದಿನಾಚರಣೆಯ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಅಂಕದ ಜತೆಗೆ ಜ್ಞಾನದ ಹಸಿವು ಇದ್ದಾಗ ವಿದ್ಯಾರ್ಥಿ ಪರಿಪೂರ್ಣ ವ್ಯಕ್ತಿತ್ವ ಹೊಂದುತ್ತಾನೆ. ಇದರಿಂದ ಆತ ಸಮಾಜಮುಖಿಯಾಗಿ ಬೆಳೆಯುತ್ತಾನೆ. ಜ್ಞಾನದ ಅಡಿಪಾಯದಲ್ಲಿ ಅಂಕಗಳು ಶೈಕ್ಷಣಿಕ ಕೌಶಲ್ಯವನ್ನು ಎತ್ತಿ ಹಿಡಿಯುತ್ತದೆ ಎಂದವರು ವಿವರಿಸಿದರು.
ಗೌರವ ಅತಿಥಿಯಾಗಿ ಭಾಗವಹಿಸಿದ ಯೇನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಯೇನೆಪೋಯ ಅಬ್ದುಲ್ ಕುಂಞಿ ಅವರು ಮಾತನಾಡಿ, ಯಶಸ್ಸು ಸುಲಭವಲ್ಲ. ಸತತ ಪರಿಶ್ರಮದೊಂದಿಗೆ ಅಚಲ ನಿರ್ಧಾರದಿಂದ ವಿದ್ಯಾರ್ಥಿಗಳು ಸಮಾಜದಲ್ಲಿ ಮುಂಚೂಣಿಗೆ ಬರುತ್ತಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು, ರ‍್ಯಾಂಕ್ ವಿಜೇತ ಸಾಧಕರನ್ನು ಸನ್ಮಾನಿಸಿದಾಗ ಇತರ ವಿದ್ಯಾರ್ಥಿಗಳು ಸ್ಪೂರ್ತಿ ಪಡೆಯುತ್ತಾರೆ. ಶ್ರಮವಹಿಸಿ ಓದುವ ಮನೋಭಾವ ಮೂಡಿದಾಗ ತಾವೂ ಸಾಧಿಸಬೇಕು ಎಂಬ ಹಂಬಲ ಅವರಲ್ಲಿ ಚಿಗುರೊಡೆಯುತ್ತದೆ ಎಂದು ಹೇಳಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಅವರು ತಮ್ಮ ಪ್ರಾಸ್ತಾವಿಕ ಭಾಷಣ ಮಾಡಿ, ವಿದ್ಯಾರ್ಥಿಗಳ ಭವಿಷ್ಯ ಅವರ ಕೈಯಲ್ಲೇ ಇದೆ. ಗುರಿಯ ಕುರಿತು ಸ್ಪಷ್ಟತೆ, ನಿರ್ಧಾರ, ಪರಿಶ್ರಮ ಮತ್ತು ಕಾಳಜಿ ಇದ್ದಾಗ ವಿದ್ಯಾರ್ಥಿಗಳು ಸುಭದ್ರ ಬದುಕಿಗೆ ಹೆಜ್ಜೆ ಇರಿಸುತ್ತಾರೆ ಎಂದರು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸ್ಟಾರ್ ವಿಜೇತರು:
ಧೀರೆನ್ ಎ. ಶೆಟ್ಟಿ(ಸೂಪರ್ ಸ್ಟಾರ್), ಸಾಯೀಶ್ ಶ್ರವಣ್ ಪಂಡಿತ್(ಬೆಸ್ಟ್ ಇನ್ ಸ್ಕೊಲಾಸ್ಟಿಕ್), ನಿಯತಿ ಎನ್(ನಾನ್ ಸ್ಕೊಲಾಸ್ಟಿಕ್) ಪ್ರಸಕ್ತ ಶೈಕ್ಷಣಿಕ ಸಾಲಿನ ಸ್ಟಾರ್ ಪುರಸ್ಕಾರಕ್ಕೆ ಪಾತ್ರರಾದರು.
ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ಆರ್ಕಿಟೆಕ್ಟ್ ದೀಪಿಕಾ ಎ. ನಾಯಕ್, ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಸಿ.ಎ. ಎಸ್.ಎಸ್. ನಾಯಕ್, ಆಡಿಟರ್ ಸಿ.ಎ. ಜಗನ್ನಾಥ ಕಾಮತ್, ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ಕೊಡಿಯಾಲ್‌ಬೈಲ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂಭ್ರಮ್ ವರ್ಣೇಕರ್, ಕಾರ್ಯದರ್ಶಿ ಪಾವನಿ ರಜನೀಶ್ ವರ್ಮಾ ಉಪಸ್ಥಿತರಿದ್ದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಕೆ. ವಿಜಯನ್ ಕರಿಪ್ಪಾಲ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಹಾಗೂ ಕಾರ್ಯಕ್ರಮ ನಿರ್ದೇಶಕ ಸುಬ್ರಹ್ಮಣ್ಯ ಉಡುಪ ವಂದಿಸಿ, ವೈಷ್ಣವಿ ಗುರುರಾಜ್ ಮತ್ತು ಉಜ್ವಲ್ ಎಸ್. ಬೂದಿಯಾಳ್ ಕಾರ್ಯಕ್ರಮ ನಿರೂಪಿಸಿದರು.