
ಫಿಲಂ ಫೆಸ್ಟ್, ಯುವಮನ, ಶ್ವಾನ ಪ್ರದರ್ಶನ: ಕರಾವಳಿ ಉತ್ಸವಕ್ಕೆ ನಗರದ ವಿವಿಧೆಡೆ ಜನರ ಸೆಳೆಯಲು ವೈವಿಧ್ಯಮಯ ಕಾರ್ಯಕ್ರಮ
ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಮಂಗಳೂರು ನಗರದ ವಿವಿಧೆಡೆ ಜನರನ್ನು ಆಕರ್ಷಿಸಲು ಸಾಧ್ಯವಾಗುವಂತೆ ವಿವಿಧ ಕಾರ್ಯಕ್ರಮ ಯೋಜಿಸಲಾಗಿದೆ. ಜನವರಿ 2 ಮತ್ತು 3 ರಂದು ನಗರದ ಭಾರತ್ ಸಿನಿಮಾಸ್‌ನಲ್ಲಿ ಫಿಲಂ ಫೆಸ್ಟಿವಲ್ ನಡೆಯಲಿದ್ದು, ಈ ಸಂದರ್ಭದಲ್ಲಿ ಕೊಂಕಣಿ, ತುಳು, ಕನ್ನಡ ಮತ್ತಿತರ ಭಾಷೆಗಳಲ್ಲಿ ಚಲನಚಿತ್ರಗಳ ಉಚಿತ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನವರಿ 4 ಮತ್ತು 5 ರಂದು ಯುವಜನರಿಗಾಗಿ ನಗರದ ಕದ್ರಿ ಪಾರ್ಕ್‌ನಲ್ಲಿ ‘ಯುವ ಮನ’ ಎನ್ನುವ ಕಾರ್ಯಕ್ರಮ ನಡೆಯಲಿದೆ. ಮುಖ್ಯವಾಗಿ ಯುವಜನರನ್ನು ಆಕರ್ಷಿಸುವ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಎರಡು ದಿನ ಸಂಜೆ 5 ರಿಂದ ಸಂಗೀತ ಕಾರ್ಯಕ್ರಮ, ಗ್ಯಾಬ್ರಿಯಲ್ ಟ್ರೂಪ್, ರೌಂಡ್ ಟೇಬಲ್ ಇ ನ್‌ಸ್ಪೈರಿಂಗ್ ಟಾಕ್, ಆದಿತ್ಯ ಅವರಿಂದ ತುಳು ರ‍್ಯಾಪ್, ನೃತ್ಯ, ಕಲಾಶಾಲೆ ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಜನವರಿ 4 ರಂದು ಸಂಜೆ 3 ರಿಂದ 6 ಗಂಟೆ ತನಕ ಬೈಕ್ ಮತ್ತು ಕಾರು ಶೋ ನಡೆಯಲಿದೆ. ವಿಂಟೇಜ್ ವಾಹನಗಳಲ್ಲದೆ, ವೈವಿಧ್ಯಮಯ ಹೊಸ ವಾಹನಗಳ ಪ್ರದರ್ಶನ ಕೂಡ ಈ ಸಂದರ್ಭ ನಡೆಯುವುದು. ಈ ಕಾರ್ಯಕ್ರಮಕ್ಕಾಗಿ ಕದ್ರಿ ಉದ್ಯಾನವನ ನಡುವಿನ ರಸ್ತೆಯಲ್ಲಿ ಸಾರ್ವಜನಿಕರ ವಾಹನ ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಜ.5 ರಂದು ಶ್ವಾನ ಪ್ರದರ್ಶನ:
ಕದ್ರಿ ಪಾರ್ಕ್‌ನಲ್ಲಿ ಜ.5 ರಂದು ಸಂಜೆ 3 ರಿಂದ 6 ಗಂಟೆ ತನಕ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ನಡೆಯಲಿದೆ. ಭಾಗವಹಿಸುವ ನಾಯಿಗಳ ಪ್ರವೇಶ ಖಾತರಿಪಡಿಸಲು ನೋಂದಣಿ ಸಮಯ ಅಂದು ಮಧ್ಯಾಹ್ನ 1 ರಿಂದ 3 ಗಂಟೆ ತನಕ ನಿಗದಿಪಡಿಸಲಾಗಿದೆ. ಸುಮಾರು 20 ತಳಿಗಳ ನಾಯಿಗಳು ಪ್ರದರ್ಶನದಲ್ಲಿ ಬಾಗವಹಿಸುವ ನಿರೀಕ್ಷೆ ಇದೆ. ಭಾಗವಹಿಸುವ ನಾಯಿಗಳಿಗೆ ಪ್ರಥಮ 10,000 ರೂ, ದ್ವಿತೀಯ ೭,೫೦೦ ರೂ ಹಾಗೂ ತೃತೀಯ 5,000 ರೂ ನಗದು ಹಾಗೂ ಫಲಕಗಳ ಬಹುಮಾನ ಘೋಷಿಸಲಾಗಿದೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಶ್ವಾನದಳದಿಂದ ಆಕರ್ಷಕ ಪ್ರದರ್ಶನ ಈ ಸಂದರ್ಭ ನಡೆಯಲಿದೆ. ಆಸುಪಾಸಿನ ಸುಮಾರು ಮೂರು ಜಿಲ್ಲೆಗಳ ನಾಯಿಗಳು ಪ್ರದರ್ಶ ನದಲ್ಲಿ ಭಾಗವಹಿಸಲಿವೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಚಲನಚಿತ್ರ ಉತ್ಸವದಲ್ಲಿ ಸಾರಾಂಶ (ಕನ್ನಡ). ತರ್ಪಣ (ಕೊಂಕಣಿ), ಕುಬಿ ಮತ್ತು ಇಯಾಲ (ಕನ್ನಡ), ಗರುಡ ಗಮನ ವೃಷಭ ವಾಹನ (ಕನ್ನಡ), ಅರಿಷಡ್ವರ್ಗ (ಕ ನ್ನಡ), 19.20.21 (ಕನ್ನಡ)ರಾಜಾ ಸೌಂಡ್ಸ್ ಆಂಡ್ ಲೈಟ್ಸ್ (ತುಳು), ಮಧ್ಯಂತರ ಕನ್ನಡ ಕಿರುಚಿತ್ರ), ಕಾಂತಾರ (ಕನ್ನಡ) ಚಿತ್ರಗಳು ಪ್ರದರ್ಶನಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.