ಪೊಲೀಸ್ ಆಯುಕ್ತರ ಅಮಾನತಿಗೆ ಅಗ್ರಹಿಸಿ ಸಾಮೂಹಿಕ ಧರಣಿ

ಪೊಲೀಸ್ ಆಯುಕ್ತರ ಅಮಾನತಿಗೆ ಅಗ್ರಹಿಸಿ ಸಾಮೂಹಿಕ ಧರಣಿ


ಮಂಗಳೂರು: ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರನ್ನು ಅಮಾನತುಗೊಳಿಸುವಂತೆ ಮತ್ತು ಕಮಿಷನರೇಟ್ ವ್ಯಾಪ್ತಿಯಲ್ಲಿ ಧರಣಿ,ಪ್ರತಿಭಟನೆಗಳಿಗೆ ಅವಕಾಶ ನೀಡುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ ಮಂಗಳೂರು ಇವುಗಳ ಆಶ್ರಯದಲ್ಲಿ ಕ್ಲಾಕ್ ಟವರ್ ಬಳಿ ಸೋಮವಾರ ಬೆಳಗ್ಗೆ ಸಾಮೂಹಿಕ ಧರಣಿ ನಡೆಯಿತು.

ಧರಣಿ ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಸಿಪಿಎಂ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗ್ರವಾಲ್ ಅವರನ್ನು ವರ್ಗಾವಣೆಗೆ ಆಗ್ರಹಿಸಿ ಕಳೆದೊಂದು ತಿಂಗಳಿನಿಂದ ಹೋರಾಟ ನಡೆಯುತ್ತಿದೆ. ರಾಜ್ಯ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸುತ್ತದೆ ಎಂಬ ಭರವಸೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಬಗ್ಗೆ ನಮಗೆ ನಂಬಿಕೆ ಇದೆ. ಮಂಗಳೂರು ಸುಸಂಸ್ಕೃತ ನಗರ. ಇಲ್ಲಿ ಪೊಲೀಸ್ ಅಧಿಕಾರಿ ವಿರುದ್ಧ ಇಷ್ಟೊಂದು ದೀರ್ಘಾವಧಿ ಪ್ರತಿಭಟನೆ ಈ ವರೆಗೂ ನಡೆದಿಲ್ಲ. ಅದು ಕೂಡಾ ಜನಪರ ಸಂಘಟನೆಗಳಿಂದ. ಆದ್ದರಿಂದ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. 

ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸಿ.ಟಿ.ರವಿಯನ್ನು ಬೆಂಬಲಿಸಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅಕಾಂಗ್ರೆಸ್ ಕಚೇರಿಗೆ ನಡೆಸಿದ ಮೆರವಣಿಗೆಗೆ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಿದ್ದ ಪೊಲೀಸ್ ಆಯುಕ್ತರು, ಮೆರವಣಿಗೆ ಕಾಂಗ್ರೆಸ್ ಕಚೇರಿ ಮುಂಭಾಗ ಬಂದಾಗ ಸಾಂಕೇತಿಕ ಬಂಧನ ಮಾಡಿದರು ಎಂದು ಆಪಾದಿಸಿದರು. 

ಜನಪರ ಸಂಘಟನೆಗಳಿಗೆ ನೀಡುವ ನೋಟಿಸ್ ಅನ್ನು ಬಿಜೆಪಿ ನಡೆಸುವ ಪ್ರತಿಭಟನೆಗಳಿಗೂ ನೀಡಿ ಎಂದು ಆಗ್ರಹಿಸಿದರು. 

ಪೊಲೀಸ್ ಆಯುಕ್ತರು ಬಿಜೆಪಿ ಹಿತಾಸಕ್ತಿಗಳ ಹಿತ ಕಾಪಾಡುತ್ತಿದ್ದಾರೆ, ಮತೀಯ ಶಕ್ತಿಗಳಿಗೆ ಗೂಂಡಾಗಳಿಗೆ ಭಯರಹಿತ ವಾತಾವರಣ ಮಂಗಳೂರಿನಲ್ಲಿದೆ. ಎಸ್ಪಿ ಲಿಮಿಟ್ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿಲ್ಲ. ಅಕ್ರಮ ಮರಳುಗಾರಿಕೆ ನಡೆಯುತ್ತಿಲ್ಲ. ಆದರೆ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆಗೆ ಪೊಲೀಸರಿಂದ ರಕ್ಷಣೆ ನೀಡಲಾಗುತ್ತದೆ ಎಂದು ಆರೋಪಿಸಿದರು. 

ನಮ್ಮ ಹೋರಾಟ ಪೊಲೀಸ್ ಆಯುಕ್ತರ ಎತ್ತಂಗಡಿ ಆಗುವ ತನಕ ಮುಂದುವರಿಯಲಿದೆ. ಒಂದು ವೇಳೆ ಇದು ಆಗದಿದ್ದರೆ ಪೊಲೀಸ್ ಆಯುಕ್ತರ ಕಚೇರಿಗೆ ಸಹಸ್ರಾರು ಮಂದಿಯ ಮೆರವಣಿಗೆ ನಡೆಯಲಿದೆ. ಜನವರಿ ತಿಂಗಳಲ್ಲಿ ಕಮಿಷನರ್ ಹಟಾವೊ ಪೋಸ್ಟರ್ ನ್ನು ಪ್ರತಿಯೊಂದು ಮನೆಗಳಿಗೂ ಅಂಟಿಸುವ ಮೂಲಕ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದರು.

ಸಾಮಾಜಿಕ ಹೋರಾಟಗಾರ ಎಂ.ಜಿ. ಹೆಗಡೆ ಮಾತನಾಡಿ, ಪ್ರತಿಭಟನೆ ಮಾಡುವುದು ಮಂಗಳೂರಿನಲ್ಲಿ ಅಪರಾಧವಾಗಿದೆ. ರಸ್ತೆ ಹೊಂಡಗಳ ವಿರುದ್ಧ ಪ್ರತಿಭಟನೆ ಮಾಡುವುದಕ್ಕೆ ಪೊಲೀಸ್ ಆಯುಕ್ತರು ವಿರೋಧ ಮಾಡುತ್ತಾರೆಂದರೆ ಅವರು ಪಾಸ್ ಮಾಡಿದ್ದು ಐಪಿಎಸ್ಸೊ ಅಥವಾ ಆರೆಸ್ಸೆಸ್ಸೋ ಎಂದು ನಾವು ಕೇಳಬೇಕಾಗುತ್ತದೆ ಎಂದರು. 

ವಿವಿಧ ಸಂಘಟನೆಗಳ ಪ್ರಮುಖರಾದ ದೇವದಾಸ ಎಂ., ಯಾದವ ಶೆಟ್ಟಿ , ಸುನೀಲ್ ಕುಮಾರ್ ಬಜಾಲ್, ಓಸ್ವಾಲ್ಡ್ ಫೆರ್ನಾಂಡಿಸ್, ವಸಂತ ಆಚಾರಿ, ಸುಕುಮಾರ್, ರಾಧಾಕೃಷ್ಣ, ಜಯಂತಿ ಬಿ. ಶೆಟ್ಟಿ, ಪ್ರಮೀಳಾ ಶಕ್ತಿನಗರ, ಬಿ.ಕೆ.ಇಮ್ತಿಯಾಝ್, ಬಿ.ಎಂ.ಭಟ್, ಚಿಕ್ಕ ಮುಗೇರ, ಮೂಸಬ್ಬ ಪಕ್ಷಿಕೆರೆ, ದಿನೇಶ್ ಶೆಟ್ಟಿ ಜಪ್ಪಿನಮೊಗೇರು, ಕೃಷ್ಣಾ ಇನ್ನಾ, ಶಶಿಕಲಾ ನಂತೂರು, ಜಯಂತ ನಾಯಕ್, ಜಯಲಕ್ಷ್ಮೀ ಜಪ್ಪಿನಮೊಗರು, ಈಶ್ವರಿ ಬೆಳ್ತಂಗಡಿ, ಕಿರಣ್ ಪ್ರಭ, ನಿತಿನ್ ಕುತ್ತಾರು, ಗಿರಿಜಾ ಮೂಡುಬಿದಿರೆ, ಬಿ. ಶೇಖರ, ಸುರೇಶ್ ಕುಮಾರ್, ಕರಿಯ ಕೆ., ಮಂಜಪ್ಪ ಪುತ್ರನ್, ಎನ್.ಎ.ಮುಹಮ್ಮದ್, ಶೇಖರ್ ಕುಂದರ್, ರಫೀಕ್ ಹರೇಕಳ, ರಾಕೇಶ್ ಕುಂದರ್, ರಮೇಶ್ ಉಳ್ಳಾಲ, ಯು.ಪಿ.ನಾರಾಯಣ, ಸುರೇಶ್ ಕಲ್ಲಗಾರ, ಚಂದ್ರಶೇಖರ್, ಕವಿರಾಜ್ ಉಡುಪಿ, ಅಶ್ರಫ್ ಹರೇಕಳ, ದಯಾನಂದ ಶೆಟ್ಟಿ, ಭವಾನಿ ವಾಮಂಜೂರು, ಅಶೋಕ್ ಬಂಗೇರ, ಆಶಾ ಬೋಳೂರು, ಶೇಖರ ಹೆಜಮಾಡಿ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article