
ರಿಕ್ಷಾ ಚಾಲಕರ ಪ್ರತಿಭಟನೆ
Friday, December 6, 2024
ಮಂಗಳೂರು: ಬ್ಯಾಟರಿ ರಿಕ್ಷಾಗಳಿಗೆ ಮತ್ತು ಇತರ ರಿಕ್ಷಾಗಳಿಗೆ ಒಂದೇ ರೀತಿಯ ಕಾನೂನು ಜಾರಿಗೆ ಒತ್ತಾಯಿಸಿ, ತಮಿಳುನಾಡು ರಾಜ್ಯ ಸರಕಾರದ ರೀತಿಯಲ್ಲಿ ತಿದ್ದುಪಡಿಗೆ ಒತ್ತಾಯಿಸಿ ದ. ಕ. ಜಿಲ್ಲಾ ಆಟೋ ಚಾಲಕರ ಸಂಘ ಮತ್ತು ಸಮಾನ ಮನಸ್ಕರ ವೇದಿಕೆಯಿಂದ ನಗರದ ಮಿನಿ ವಿಧಾನಸೌದದ ಬಳಿ ಇಂದು ಪ್ರತಿಭಟನೆ ನಡೆಯಿತು.
ಬ್ಯಾಟರಿ ರಿಕ್ಷಾ ಚಾಲಕರಿಗೆ ಪರವಾನಗಿಯೇ ಬೇಡ. ಎಲ್ಲಿ ಬೇಕಾದರೂ (ದೇಶಾದ್ಯಂತ) ಹೋಗಬಹುದು ಇತರ ರಿಕ್ಷಾಗಳಿಗೆ ಪರವಾನಿಗೆಯಲ್ಲಿ ಸೂಚಿಸಿದಲ್ಲಿ ಮಾತ್ರವೆಂಬ ಬೇಧ ನೀತಿಯನ್ನು ವಿರೋಧಿಸಿ, ಎಲ್ಲರೂ ಮೋಟಾರು ವಾಹನ ಕಾಯಿದೆಯ ನಿಯಮದಂತೆ ಒಂದೇ ರೀತಿಯ ನಿಯಮಗಳಿಗೆ ಒತ್ತಾಯಿಸಿ, ಚಳುವಳಿ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಡಿ.9ರಿಂದ ಆರಂಭಗೊಳ್ಳುವ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಈ ಬಗ್ಗೆ ಸೂಕ್ತ ತಿದ್ದುಪಡಿ ತಂದು ಅದನ್ನು ಜಾರಿಗೊಳಿಸಿ, ಪ್ರಾಧಿಕಾರದ ಇತಿಮಿತಿಗಳಿಗೆ ಬದ್ಧವಾಗಿ ಪರವಾನಿಗೆಗಳಿರುವಂತೆ ಕ್ರಮ ಕೈಗೊಳ್ಳುವಂತೆ ರಿಕ್ಷಾ ಚಾಲಕರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಬಿ ವಿಷ್ಣುಮೂರ್ತಿ, ಮಹಮ್ಮದ್ ಜಿಲಾನಿ, ಚಂದ್ರಹಾಸ ಕುಲಾಲ, ಸತೀಶ್ ಕುಮಾರ್, ಆಲ್ಫೋನ್ಸ್ ಡಿಸೋಜ, ರಜಾಕ್ ವಾಮಂಜೂರು, ಮೋಹನ ಕೆಇ, ವಸಂತ ದೇವಾಡಿಗ, ದಯಾನಂದ ಶೆಟ್ಟಿ, ಪ್ರವೀಣ್ ಡಿಸೋಜ ವಹಿಸಿದ್ದರು.