
ರಾಷ್ಟ್ರೀಯ ಗಣಿತ ದಿನಾಚರಣೆ: ಅಧ್ಯಾಪಕರಿಗೆ ಕಾರ್ಯಾಗಾರ
ಮಂಗಳೂರು: ಗಣಿತದ ಮೇರು ಸಾಧಕ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಡಯಟ್, ಮಂಗಳೂರಿನ ಸಹಕಾರದೊಂದಿಗೆ ಜಿಲ್ಲೆಯ ಗಣಿತ ಅಧ್ಯಾಪಕರಿಗೆ ಗಣಿತ ಅಧ್ಯಾಪನದ ಬಗ್ಗೆ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಯಟ್‌ನ ಹಿರಿಯ ಉಪನ್ಯಾಸಕ ಶ್ರೀನಿವಾಸ ಅಡಿಗ ಮಾತನಾಡಿ, ಚಿಕ್ಕ ಮಕ್ಕಳಲ್ಲಿ ಗಣಿತ ವಿಷಯವು ಆಸಕ್ತಿದಾಯಕವಾಗಲು ಅಧ್ಯಾಪಕರು ಹಲವಾರು ಕ್ರಮಗಳನ್ನು ಕೈಗೊಳ್ಳಲು ಶ್ರಮಪಡಬೇಕು. ಗಣಿತವನ್ನು ದ್ವೇಷಿಸುವ ಬದಲು ಪ್ರೀತಿಸಿ, ಅದರಲ್ಲಿ ತೊಡಗಿಕೊಳ್ಳುವಂತೆ ಪ್ರಯತ್ನಿಸಬೇಕು ಎಂದರು. ಜೀವನದ ಎಲ್ಲಾ ಪ್ರಕಾರಗಳಲ್ಲೂ ಗಣಿತ ಪ್ರಮುಖವಾಗುತ್ತದೆ. ಹಾಗಾಗಿ ಅದರ ಬಗ್ಗೆ ಎಳೆವೆಯಲ್ಲಿ ಆಸಕ್ತಿ ಮೂಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್ ಮಾತನಾಡಿ, ವಿಶ್ವದಾದ್ಯಂತ ಗಣಿತ ವಿಷಯವನ್ನು ಸುಲಭವಾಗಿ ಅರ್ಥೈಸುವಂತೆ ಮಾಡಲು ಎಲ್ಲಾ ಹಂತಗಳಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಭಾರತ ಪ್ರಾಚೀನ ಕಾಲದಿಂದಲೂ ಈ ಕ್ಷೇತ್ರದಲ್ಲಿ ತನ್ನ ಪ್ರತಿಭೆಯನ್ನು ಮೆರೆದಿದೆ. ಈ ಪರಂಪರೆ ಮುಂದುವರಿಯುವಂತೆ ಆಧುನಿಕ ತಂತ್ರಜ್ಞಾನದ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಅಧ್ಯಾಪಕರು ಪ್ರಯತ್ನಪಟ್ಟಲ್ಲಿ ನಿರೀಕ್ಷಿತ ಫಲ ದೊರೆಯುವುದರಲ್ಲಿ ಸಂಶಯವಿಲ್ಲ. ಪ್ರಾದೇಶಿಕ ವಿಜ್ಞಾನ ಕೇಂದ್ರ ಆಸಕ್ತ ಸಂಪನ್ಮೂಲ ವ್ಯಕ್ತಿಗಳ ಹಾಗೂ ಸಂಸ್ಥೆಗಳ ಸಹಕಾರದೊಂದಿಗೆ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುಬ್ರಹ್ಮಣ್ಯ ಭಟ್, ದೀಕ್ಷಿತಾ ಎಸ್.ಟಿ., ಮತ್ತು ವೀಣಾ ಜಿ. ಪ್ರಾತ್ಯಕ್ಷಿಕೆಗಳೊಂದಿಗೆ ಗಣಿತದ ಮೂಲ ಸಿದ್ಧಾಂತಗಳನ್ನು ವಿವರಿಸಿದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಅಧ್ಯಾಪಕರು ಕಾರ್ಯಾಗಾರದ ಅಂಶಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಇನ್ನೊವೇಶನ್ ಹಬ್ ಮೆಂಟರ್ ಅಂಬಿಕಾ ಸ್ವಾಗತಿಸಿ, ಕೇಂದ್ರದ ಕ್ಯುರೇಟರ್ ಜಗನ್ನಾಥ್ ನಿರೂಪಿಸಿದರು.