
ಫೆಂಗಲ್ ಚಂಡಮಾರುತ: ದೊಡ್ಡ ಮಟ್ಟದ ಹಾನಿ ಆಗಿಲ್ಲ: ಜಿಲ್ಲಾಧಿಕಾರಿ
ಮಂಗಳೂರು: ಫೆಂಗಲ್ ಚಂಡಮಾರುತದಿಂದಾಗಿ ಮಂಗಳೂರಿನ ಬಜ್ಪೆ ಪ್ರದೇಶ, ಮಂಗಳೂರು ನಗರ ಹಾಗೂ ಉಳ್ಳಾಲ ಪ್ರದೇಶದಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗಿನ ವರೆಗೆ ಅತಿ ಹೆಚ್ಚು ಮಳೆಯಾಗಿದ್ದು, ಯಾವುದೇ ರೀತಿಯ ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹೇಳಿದರು.
ಅವರು ಇಂದು ಮಾಧ್ಯಮದವರ ಜೊತೆ ಮಾತನಾಡಿ, ಕೊಟ್ಟಾರ ಚೌಕಿ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದೆ. ಸುರತ್ಕಲ್ ಪ್ರದೇಶದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದ್ದು, ಆ ಕೂಡಲೇ ಎನ್‌ಡಿಆರ್‌ಎಫ್ ವತಿಯಿಂದ ನೀರು ತೆರವುಗೊಳಿಸುವ ಕೆಲಸ ಮಾಡಲಾಗಿದೆ. ಉಳ್ಳಾಲ ಪ್ರದೇಶದಲ್ಲಿ ನೆರೆಯಲ್ಲಿ ಸಿಲುಕಿದ್ದ ವಾಹನಗಳನ್ನು ಕ್ರೈನ್ ಮೂಲಕ ಮೇಲಕ್ಕೆ ಎತ್ತಲಾಗಿದೆ ಇಡೀ ರಾತ್ರಿ ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ದಾರೆ ಎಂದು ತಿಳಿಸಿದರು.
ಬಜ್ಪೆಯ ಆದ್ಯಪಾಡಿ ಪ್ರದೇಶದಲ್ಲಿ ಗುಡ್ಡ ಕುಸಿತವಾಗಿದ್ದು, ಜೆಸಿಬಿ ಮೂಲಕ ಮಣ್ಣು ತೆರವು ಮಾಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಾಗೂ ಕೆಲವು ಕಡೆಗಳಲ್ಲಿ ಆವರಣ ಗೋಡೆಗಳು ಕುಸಿತವಾಗಿದೆ. ಸುಬ್ರಹ್ಮಣ್ಯದಲ್ಲಿ ಜಾತ್ರೆ ನಡೆಯುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು, ನದಿಗೆ ಇಳಿಯದಂತೆ ಸೂಚಿಸಲಾಗಿದೆ. ಅದಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ನೀರನ್ನು ಸಂಗ್ರಹಿಸಿ ಬಳಿಕ ಒಂದು ಕಡೆಯಲ್ಲಿ ಹರಿಯಬಿಡುತ್ತಿದ್ದಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ವಿಮಾನ ನಿಲ್ದಾಣದಲ್ಲಿ ಎರಡು ಕಡೆಗಳಲ್ಲಿ ನೀರು ಹರಿಯಬಿಡುತ್ತಿದ್ದಾರೆ ಎಂದು ಕೇಳಿಬಂದಿದ್ದು, ಈ ಬಗ್ಗೆ ಅಧ್ಯಾಯನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.