
84ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ ಹಾಗೂ ಮಹಿಳಾ ಅಥ್ಲೇಟಿಕ್ಸ್ ಕ್ರೀಡಾಕೂಟ: ರಾಷ್ಟ್ರೀಯ ಮಟ್ಟದಲ್ಲಿ ಅಪ್ರತಿಮ ಸಾಧನೆ ಮೆರೆದ ‘ಆಳ್ವಾಸ್’: ಮಂಗಳೂರು ವಿ.ವಿ. ಚಾಂಪಿಯನ್ಸ್
ಮೂಡುಬಿದಿರೆ: ಒಡಿಶಾದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಸಂಸ್ಥೆಯಲ್ಲಿ, ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿ ಸಹಭಾಗಿತ್ವದಲ್ಲಿ ಡಿ 26ರಿಂದ 30ರವರೆಗೆ ನಡೆದ ೮೪ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷ ಹಾಗೂ ಮಹಿಳಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮಂಗಳೂರು ವಿವಿ ತಂಡವು ರಾಷ್ಟ್ರೀಯ ಮಟ್ಟದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಿಂಹಪಾಲಿನ ಕೊಡುಗೆಯಿಂದ ಸತತ 8ನೇ ಬಾರಿಗೆ ಸಮಗ್ರ ಚಾಂಪಿಯನ್‌ಶಿಪ್ ಪಟ್ಟ ಮುಡಿಗೇರಿಸಿಕೊಂಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪುರುಷ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ ಮಂಗಳೂರು ವಿವಿ 48(ಪುರುಷರ) ಹಾಗೂ 73(ಮಹಿಳೆಯರ) ಅಂಕಗಳೊಂದಿಗೆ ಒಟ್ಟು 121 ಅಂಕ ಪಡೆದು ಎರಡು ವಿಭಾಗದ ಸಮಗ್ರ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮಂಗಳೂರು ವಿವಿ ಎರಡು ವಿಭಾಗಗಳಲ್ಲಿ ಒಟ್ಟು 5 ಚಿನ್ನ, 5 ಬೆಳ್ಳಿ, 7 ಕಂಚಿನ ಪದಕದೊಂದಿಗೆ ಒಟ್ಟು 17 ಪದಕವನ್ನು ಪಡೆದುಕೊಂಡಿತು. ಪದಕ ವಿಜೇತ ಎಲ್ಲಾ ವಿದ್ಯಾರ್ಥಿಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಪದಕಗಳ ವಿವರ:
ಪುರುಷರ ವಿಭಾಗದಲ್ಲಿ 5000ಮೀ ಓಟದಲ್ಲಿ ಗಗನ ಪ್ರಥಮ, 20ಕೀ.ಮಿ ನಡಿಗೆ ಓಟದಲ್ಲಿ ಸಚಿನ್ ಪ್ರಥಮ, 800ಮೀ ಓಟದಲ್ಲಿ ತುಷಾರ್ ತೃತೀಯ, 3000ಮೀ ಸ್ಟೀಪಲ್‌ಚೇಸ್‌ನಲ್ಲಿ ರೋಹಿತ್ ತೃತೀಯ, 5000ಮೀ ಓಟದಲ್ಲಿ ಅಮಾನ್‌ಕುಮಾರ್ ತೃತೀಯ ಸ್ಥಾನ ಪಡೆದರು.
ಮಹಿಳೆಯರ ವಿಭಾಗದಲ್ಲಿ 3000ಮೀ ಸ್ಟೀಪಲ್‌ಚೇಸ್‌ನಲ್ಲಿ ಮಂಜು ಯಾದವ್ ಪ್ರಥಮ, ಮ್ಯಾರಥಾನ್‌ನಲ್ಲಿ ಕೆ ಎಂ ಸೋನಿಯಾ ಪ್ರಥಮ, 400 ಮೀ ಹರ್ಡಲ್ಸ್ನಲ್ಲಿ ದೀಕ್ಷಿತಾ ದ್ವಿತೀಯ, ಉದ್ದ ಜಿಗಿತದಲ್ಲಿ ಸಿಂಚನಾ ಎಂ.ಎಸ್ ದ್ವಿತೀಯ, ಜಾವೆಲಿನ್‌ಥ್ರೋನಲ್ಲಿ ಸಾಕ್ಷಿ ಶರ್ಮಾ ದ್ವಿತೀಯ, ಪೋಲ್‌ವಾರ್ಟ್ನಲ್ಲಿ ಸಿಂಧುಶ್ರೀ ಜಿ ದ್ವಿತೀಯ, ಹೆಪ್ಟಾತ್ಲನ್ ಕಮಲ್ಜೀತ್ ದ್ವಿತೀಯ, 10,000ಮೀ ಓಟದಲ್ಲಿ ಜ್ಯೋತಿ ತೃತೀಯ, 20 ಕಿ.ಮೀ ನಡಿಗೆ ಓಟದಲ್ಲಿ ಕೆ.ಎಂ ಶಾಲಿನಿ ತೃತೀಯ, ಮ್ಯಾರಥಾನ್‌ನಲ್ಲಿ ಜ್ಯೋತಿ ತೃತೀಯ, 400ಮೀ ಹರ್ಡಲ್ಸ್ನಲ್ಲಿ ಪ್ರಜ್ಞಾ ಕೆ ತೃತೀಯ ಸ್ಥಾನ ಪಡೆದರು.
ಮಿಕ್ಸಡ್ ರಿಲೇಯಲ್ಲಿ ತೀರ್ತೆಶ್ ಶೆಟ್ಟಿ, ಅನೂಜ್, ದಿಶಾ ಹಾಗೂ ಪ್ರಜ್ಞಾ ತಂಡಕ್ಕೆ ಪ್ರಥಮ ಸ್ಥಾನ ಪಡೆದರು.
ನೂತನ ಕೂಟ ದಾಖಲೆ:
ಮಂಗಳೂರು ವಿವಿ ಪ್ರತಿನಿಧಿಸಿದ ಆಳ್ವಾಸ್ ವಿದ್ಯಾರ್ಥಿಗಳು 2 ನೂತನ ಕೂಟ ದಾಖಲಿಸಿದರೆ ಹಾಗೂ ಒಂದು ಕೂಟ ದಾಖಲೆಯನ್ನು ಉತ್ತಮ ಪಡಿಸಿಕೊಂಡರು. 20ಕಿ.ಮೀ ನಡಿಗೆ ಓಟವನ್ನು ಸಚಿನ್ ಸಿಂಗ್ 1.23.32 ಸೆಕೆಂಡನಲ್ಲಿ ಕ್ರಮಿಸಿ ನೂತನ ಕೂಟ ದಾಖಲೆ ನಿರ್ಮಿಸಿದರೆ, ಮಹಿಳೆಯರ ವಿಭಾಗದ 3000ಮೀ ಸ್ಟೀಪಲ್‌ಚೇಸ್‌ನಲ್ಲಿ ಮಂಜು ಯಾದವ್ 10.00.14 ಸೆ.ನಲ್ಲಿ ಗುರಿ ಮುಟ್ಟಿ ನೂತನ ದಾಖಲೆ ನಿರ್ಮಿಸಿದರು. ಆಳ್ವಾಸ್‌ನ ಸಾಕ್ಷಿ ಶರ್ಮಾ ಜಾವಲಿನ್ ಥ್ರೋ ವಿಭಾಗದಲ್ಲಿ ಪೂನಂರಾಣಿಯ ಹೆಸರಿನಲ್ಲಿದ್ದ(53.26ಮೀ) ಕೂಟದಾಖಲೆಯನ್ನು 53.41 ಮೀ ದೂರ ಎಸೆಯುವ ಮೂಲಕ ಕೂಟ ದಾಖಲೆಯ ಸಾಧನೆಯನ್ನು ಉತ್ತಮಪಡಿಸಿಕೊಂಡರು.
2024 ವರೆಗೆ ನಡೆದ ಎಲ್ಲಾ ರಾಷ್ಟ್ರೀಯ ಮಟ್ಟದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಮಂಗಳೂರು ವಿವಿ ನಿರ್ಮಿಸಿರುವ 6 ನೂತನಕೂಟ ದಾಖಲೆಗಳು ಆಳ್ವಾಸ್ ವಿದ್ಯಾರ್ಥಿಗಳ ಕೊಡುಗೆಯಾಗಿದೆ.
ಬೆಸ್ಟ್ ಅಥ್ಲೇಟ್:
3000ಮೀ ಸ್ಟೀಪಲ್‌ಚೇಸ್‌ನಲ್ಲಿ ನೂತನ ಕೂಟ ದಾಖಲೆ ಮೆರೆದ ಆಳ್ವಾಸ್‌ನ ಮಂಜು ಯಾದವ್ ಮಹಿಳಾ ವಿಭಾಗದ ಬೆಸ್ಟ್ ಅಥ್ಲೇಟ್ ಗೌರವಕ್ಕೆ ಭಾಜನರಾಗಿದ್ದಾರೆ.
ಈ ಕ್ರೀಡಾ ಕೂಟದಲ್ಲಿ ಮೊದಲ 8 ಸ್ಥಾನಗಳಿಸಿದ ಕ್ರೀಡಾಪಟುಗಳು ಖೇಲೋ ಇಂಡಿಯಾ ಗೇಮ್ಸ್ಗೆ ಅರ್ಹತೆ ಪಡೆದಿದ್ದಾರೆ.
ಮಂಗಳೂರು ವಿವಿ ಪ್ರತಿನಿಧಿಸಿದ ಪುರುಷರ ಹಾಗೂ ಮಹಿಳೆಯರ 81 ಕ್ರೀಡಾಪಟುಗಳ ತಂಡದಲ್ಲಿ 73 ವಿದ್ಯಾರ್ಥಿಗಳು ಆಳ್ವಾಸ್ ಸಂಸ್ಥೆಯವರು.
ಎರಡು ವಿಭಾಗಗಳಲ್ಲಿ ಒಟ್ಟು 5 ಚಿನ್ನ, 5 ಬೆಳ್ಳಿ, 7 ಕಂಚಿನ ಪದಕದೊಂದಿಗೆ ಒಟ್ಟು 17 ಪದಕಗಳ ಬೇಟೆ, ಪದಕ ವಿಜೇತರೆಲ್ಲರೂ ಆಳ್ವಾಸ್ ವಿದ್ಯಾರ್ಥಿಗಳು.
ಆಳ್ವಾಸ್ ವಿದ್ಯಾರ್ಥಿಗಳಿಂದ 2 ನೂತನ ಕೂಟ ದಾಖಲೆ ಹಾಗೂ ಒಂದು ಕೂಟ ದಾಖಲೆಯನ್ನು ಉತ್ತಮಗೊಳಿಸಿಕೊಂಡ ಹಿರಿಮೆ.
ಆಳ್ವಾಸ್‌ನ ಮಂಜು ಯಾದವ್ ಮಹಿಳಾ ವಿಭಾಗದ ಬೆಸ್ಟ್ ಅಥ್ಲೇಟ್ ಗೌರವಕ್ಕೆ ಭಾಜನ.
ರಾಷ್ಟ್ರೀಯ ಮಟ್ಟದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಮಂಗಳೂರು ವಿವಿ ಹೆಸರಿನಲ್ಲಿರುವ 6 ನೂತನಕೂಟ ದಾಖಲೆಗಳು ಆಳ್ವಾಸ್ ಹೆಸರಿನಲ್ಲಿದೆ.