
ಗೊಂದೋಳು ಪೂಜೆಗೆ ಹೋದ ತಂದೆ-ಮಗ: ಕಾರು ಪಲ್ಟಿ ಜಟ್ಟಿಪಳ್ಳದ ಮೂವರ ದುರ್ಮರಣ
ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಂದಕಕ್ಕೆ ಉರುಳಿ ಬಿದ್ದು ತಂದೆ ಮಗನ ಸಹಿತ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪರ್ಲಡ್ಕ ಬೈಪಾಸ್ ನಲ್ಲಿ ನಡೆದಿದೆ.
ಮೃತ ಪಟ್ಟವರನ್ನು ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ(72), ಅವರ ಪುತ್ರ ಚಿದಾನಂದ ನಾಯ್ಕ(58) ಮತ್ತು ನೆರೆಮನೆ ನಿವಾಸಿ ರಮೇಶ್ ನಾಯ್ಕ (68) ಎಂದು ಗುರುತಿಸಲಾಗಿದೆ. ಇವರು ಬಂಟ್ವಾಳ ತಾಲೂಕಿನ ಪುಣಚದಲ್ಲಿ ನಡೆದ ಗೋಂದೊಳು ಪೂಜೆಗೆ ಆಲ್ಟೋ ಕಾರಿನಲ್ಲಿ ಪುಣಚಕ್ಕೆ ಶುಕ್ರವಾರ ರಾತ್ರಿ ಆಗಮಿಸಿದ್ದರು ಎನ್ನಲಾಗಿದ್ದು, ಹಿಂತಿರುಗಿ ಸುಳ್ಯಕ್ಕೆ ತೆರಳುತ್ತಿದ್ದ ವೇಳೆ ಮುಂಜಾನೆ ಸುಮಾರು ೪.೧೫ರ ವೇಳೆಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದು ಕಾರಿನಲ್ಲಿದ್ದ ಮೂವರೂ ಮೃತಪಟ್ಟಿದ್ದು. ಆದರೆ ಬೆಳಗ್ಗಿನ ಬಳಿಕವಷ್ಟೇ ಘಟನೆ ಬೆಳಕಿಗೆ ಬಂದಿತ್ತು. ಕಂದಕಕ್ಕೆ ಉರುಳಿದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತದೇಹಗಳು ಕಾರಿನ ಹೊರಭಾಗಕ್ಕೆ ಎಸೆಯಲ್ಪಟ್ಟಿತ್ತು.
ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಉದಯ ರವಿ ಹಾಗೂ ಎಫ್.ಎಸ್.ಐ.ಎಲ್ ತಂಡದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಬಿಟ್ಟು ಕೊಡಲಾಯಿತು. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.