
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಶೈಕ್ಷಣಿಕ ವಿನಿಮಯ ಮತ್ತು ಉಪನ್ಯಾಸ
Friday, December 6, 2024
ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಗಣಿತ ವಿಭಾಗವು ಶೈಕ್ಷಣಿಕ ಒಡಂಬಡಿಕೆ ಕಾರ್ಯಕ್ರಮದಡಿಯಲ್ಲಿ ಶೈಕ್ಷಣಿಕ ವಿನಿಮಯ ಮತ್ತು ಉಪನ್ಯಾಸ ಸರಣಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿತು.
ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥರಾದ ಡಾ. ಜಗದೀಶ ಬಿ. ಅವರು ರಿಂಗ್ ಥಿಯರಿಯ ರಫ್ ಸೆಟ್ ಥಿಯರಿಯ ಸಂಶೋಧನೆಯ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಮೂಲ ವಿಜ್ಞಾನಗಳ ಮಹತ್ವವನ್ನು ವಿವರಿಸಿದ ಅವರು ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆ ಮತ್ತು ಆಳವಾದ ಅಧ್ಯಯನದ ಆಸಕ್ತಿಯನ್ನು ಹುರಿದುಂಬಿಸಿದರು.
ಸ್ನಾತಕೋತ್ತರ ಗಣಿತ ವಿಭಾಗದ ಸಂಯೋಜಕ ಪ್ರೊ. ಗಣೇಶ್ ಭಟ್ ಕೆ. ಅವರು ಎಂಓಯು ಮಹತ್ವವನ್ನು ಮತ್ತು ಆ ಮೂಲಕ ಸಾಧಿಸಲಾದ ಸಾಧನೆಗಳ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಭಾಗವಾಗಿ ಎಂಓಯು ಅನ್ನು ನವೀಕರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಷ್ಮಾ ಮತ್ತು ಬಳಗದವರು ಪ್ರಾರ್ಥಿಸಿ, ಸ್ನಾತಕೋತ್ತರ ಗಣಿತ ವಿಭಾಗದ ಮುಖ್ಯಸ್ಥೆ ಜೀವಿತ ಕೆ.ಎಸ್. ಅವರು ಸ್ವಾಗತಿಸಿದರು ದೀಪಿಕಾ ಅವರು ವಂದಿಸಿ, ಪ್ರತೀಕ್ಷ ಅವರು ನಿರೂಪಿಸಿದರು.