
ನಾಪತ್ತೆಯಾದ ವ್ಯಕ್ತಿಯ ಶವ ಪತ್ತೆ: ಸಾವಿನ ಸುತ್ತ ಹಲವು ಅನುಮಾನ
ಪುತ್ತೂರು: ಪುತ್ತೂರು ನಗರಕ್ಕೆಂದು ಗುರುವಾರ ಸಂಜೆ ಹಣದ ಬ್ಯಾಗಿನೊಂದಿಗೆ ಹೊರಟು ಬಂದಿದ್ದ ಪಡ್ಡಾಯೂರಿನ ವ್ಯಕ್ತಿಯೊಬ್ಬರ ಮೃತದೇಹ ನಗರದ ಹೊರವಲಯದ ರೋಟರಿಪುರ ವ್ಯಾಪ್ತಿಯ ತೋಡಿನಲ್ಲಿ ಶುಕ್ರವಾರ ಪತ್ತೆಯಾಗಿದೆ. ಮಳೆಯ ಸಂದರ್ಭದಲ್ಲಿ ರಸ್ತೆ ಬದಿಯ ಚರಂಡಿಗೆ ಬಿದ್ದ ಅವರು ಮಳೆನೀರಿನೊಂದಿಗೆ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದರೂ, ಸಾವಿನ ವಿಚಾರದಲ್ಲಿ ಹಲವು ಅನುಮಾನಗಳು ಎದ್ದಿದೆ.
ಪಡ್ನೂರು ಗ್ರಾಮದ ಪಡ್ಡಾಯೂರು ನಿವಾಸಿ, ವಿವೇಕಾನಂದ ಕಾಲೇಜಿನ ನಿವೃತ್ತ ಸಿಬ್ಬಂದಿ ನಂದಕುಮಾರ್ (68) ಮೃತಪಟ್ಟವರು.
ನಂದಕುಮಾರ್ ಅವರ ಪತ್ನಿ ಜಯಂತಿ ಅವರು ಮಂಗಳೂರಿನಲ್ಲಿ ನೆಲೆಸಿರುವ ತನ್ನ ಕಿರಿಯ ಪುತ್ರಿಗೆ ನೀಡಲೆಂದು ನವೋದಯ ಸ್ವಸಹಾಯ ಸಂಘದಿಂದ 1.50 ಲಕ್ಷ ರೂ. ಸಾಲ ಪಡೆದಿದ್ದರು. ಈ ಹಣವನ್ನು ಮಂಗಳೂರಿನ ಪುತ್ರಿಗೆ ಕಳುಹಿಸಿಕೊಡುವ ವ್ಯವಸ್ಥೆಗಾಗಿ ನಂದಕುಮಾರ್ ಅವರು ಹಣವನ್ನು ಬ್ಯಾಗೊಂದರಲ್ಲಿ ತುಂಬಿಸಿಕೊಂಡು ಪುತ್ತೂರು ನಗರದ ಸುಶ್ರೂತ ಆಸ್ಪತ್ರೆಯ ಬಳಿಯಿರುವ ತನ್ನ ಸಹೋದರಿಯ ಮನೆಗೆಂದು ಗುರುವಾರ ಸಂಜೆ ಹೊರಟು ಬಂದವರು ನಾಪತ್ತೆಯಾಗಿದ್ದರು. ಶುಕ್ರವಾರ ಬೆಳಿಗ್ಗೆ ಅವರ ಮೃತದೇಹ ರೋಟರಿಪುರ ವ್ಯಾಪ್ತಿಯ ತೋಡಿನಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪಡ್ಡಾಯೂರಿನ ಮನೆಯಿಂದ ಹಣದ ಬ್ಯಾಗಿನೊಂದಿಗೆ ಹೊರಟು ಬಂದಿದ್ದ ನಂದಕುಮಾರ್ ಅವರು ಪುತ್ತೂರಿನ ಸಂಚಾರ ಪೊಲೀಸ್ ಠಾಣೆಯ ಸಮೀಪದ ವೈನ್ ಶಾಪ್ ಒಂದಕ್ಕೆ ಹೋಗಿರುವುದು, ಬಳಿಕ ಅಲ್ಲಿಂದ ಹಣದ ಬ್ಯಾಗನ್ನು ಕೈಯಲ್ಲಿ ಹಿಡಿದುಕೊಂಡು ಶ್ರೀಧರ್ ಭಟ್ ಅಂಗಡಿ ಬಳಿಯ ಮೂಲಕವಾಗಿ ಉರ್ಲಾಂಡಿ ರಸ್ತೆಯಲ್ಲಿ ಸಹೋದರಿಯ ಮನೆಯ ಕಡೆಗೆ ತೆರಳಿರುವುದು ಹಾಗೂ ಸಹೋದರಿಯ ಮನೆಯ ಸಮೀಪವೇ ರಸ್ತೆ ಬದಿಯ ಚರಂಡಿಗೆ ಬಿದ್ದಿರುವ ದ್ಯಶ್ಯಗಳು ಆ ವ್ಯಾಪ್ತಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಾವಿನ ಸುತ್ತ ಅನುಮಾನ...:
ಪಡ್ಡಾಯೂರಿನಿಂದ ಹೊರಟು ಬಂದಿದ್ದ ವೇಳೆ ನಂದಕುಮಾರ್ ಅವರು ಲುಂಗಿ ಮತ್ತು ಬನಿಯಾನ್ ಧರಿಸಿದ್ದರು. ಗುರುವಾರ ಸಂಜೆ ಪುತ್ತೂರಿನಲ್ಲಿ ಮಳೆಯಾಗಿತ್ತು. ಉರ್ಲಾಂಡಿ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಚರಂಡಿಗೆ ಬಿದ್ದಿರುವ ನಂದಕುಮಾರ್ ಮತ್ತು ಅವರ ಬಳಿಯಿದ್ದ ಹಣದ ಬ್ಯಾಗ್ ಮಳೆನೀರಿನೊಂದಿಗೆ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹದಲ್ಲಿ ಬನಿಯಾನ್ ಇರಲಿಲ್ಲ. ಮಳೆನೀರಿನೊಂದಿಗೆ ಕೊಚ್ಚಿ ಹೋಗಿದ್ದರೆ ಬನಿಯನ್ ಕಿತ್ತುಹೋಗಲು ಸಾಧ್ಯವಿಲ್ಲ. ಮಳೆ ಬಂದರೂ ಉರ್ಲಾಂಡಿ ರಸ್ತೆಯ ಬದಿಯ ಚರಂಡಿಯಲ್ಲಿ ವ್ಯಕ್ತಿಯೊಬ್ಬರನ್ನು ಕೊಚ್ಚಿಕೊಂಡು ಹೋಗುವಷ್ಟು ಮಳೆನೀರಿನ ಪ್ರಮಾಣ ಇರುವುದಿಲ್ಲ ಎನ್ನುವ ಅಭಿಪ್ರಾಯಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.