ಕರಾವಳಿಯ ಎಸ್.ಡಿ.ಎಂ. ಕಾನೂನು ಕಾಲೇಜಿಗೆ 50ರ ಸಂಭ್ರಮ
ಮಂಗಳೂರು ಎಂದ ಕೂಡಲೇ ಎಲ್ಲರಿಗೂ ನೆನಪಾಗುವಂತದ್ದು ಕಡಲಿನ ಸಮುದ್ರದ ಅಲೆಗಳು ಯಕ್ಷಗಾನ ಭೂತರಾಧನೆ ಮೌಲ್ಯಯುತ ಶಿಕ್ಷಣ ಹಾಗೂ ಸೌಜನ್ಯಯುತ ಮಾತುಗಳು. ಈ ಎಲ್ಲಾ ರೂಪಕಗಳು ತುಳು ನಾಡಿನ ಹೆಮ್ಮೆಯಾದರೆ ಕರಾವಳಿಯ ಮತ್ತೊಂದು ಹೆಮ್ಮೆಯೆಂದರೆ ಅದು ಪದ್ಮಶ್ರೀ ಪುರಸ್ಕೃತ ಪೂಜ್ಯಶ್ರೀ ವೀರೇಂದ್ರ ಹೆಗಡೆಯವರ ಓಡೆತನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ.
1974ರಲ್ಲಿ ಪ್ರಾರಂಭವಾದ ಈ ಕಾನೂನು ಕಾಲೇಜು ಕರಾವಳಿಯ ಅದೆಷ್ಟೋ ಕಾನೂನು ಆಸಕ್ತರ ಕಲಿಯುವ ಕುತೂಹಲವನ್ನು ಕೆರಳಿಸಿದ. ಮತ್ತು ಅವರ ಕಲಿಕೆಯನ್ನ ಪ್ರೀತಿಸಿ ಪ್ರೋತ್ಸಾಹಿಸಲು ಅದಕ್ಕೆ ಪೂರಕವಾದ ಕಾನೂನು ಪದವಿ ನೀಡಿ ಭವಿಷ್ಯದ ಉತ್ತಮ ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರನ್ನು ಸಮಾಜಕ್ಕೆ ನೀಡಿದ ಶ್ರೇಯಸ್ಸು ಈ ಕಾಲೇಜಿಗೆ ಸಲ್ಲುತ್ತದೆ.
ಶಾಂತಿ ಮತ್ತು ಶುಭ್ರತೆಯ ಸಂಕೇತವಾಗಿ ಶ್ವೇತವರ್ಣದ ಅಂಗಿ, ನ್ಯಾಯದ ಪ್ರತೀಕವಾಗಿ ಕಪ್ಪು ಪ್ಯಾಂಟ್ ಹಾಗೂ ಕೋಟ್ ಧರಿಸಿರುವ ವಿದ್ಯಾರ್ಥಿಗಳು ನಮ್ಮ ಮುಂದೆ ನಡೆದುಕೊಂಡು ಹೋಗುತ್ತಿದ್ದರೆ ನ್ಯಾಯವಾದಿಗಳೇ ಹೊರಟಿರುವರೆನ್ನುವಂತೆ ಬಾಸವಾಗುತ್ತದೆ ಬೆಳಿಗ್ಗೆ 9 ಗಂಟೆಗೆ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಗುವ ತರಗತಿಗಳಿಗೆ ಬೆಳಗಿನ ಅವಧಿ ಮಧ್ಯಾಹ್ನದ ಅವಧಿ ಎಂದು ಎರಡು ವಿಭಾಗಗಳನ್ನು ಮಾಡಲಾಗಿದೆ.
ಮಂಗಳೂರಿನ ಹೃದಯ ಭಾಗದಲ್ಲಿರುವ ಈ ಕಾಲೇಜೆನ ವಿದ್ಯಾರ್ಥಿಗಳಿಗೆ ಮೌನದಲಿ ಕೇಳುವ ಸಮುದ್ರದ ಅಲೆಗಳ ಇಂಪಾದ ಧ್ವನಿಯ ಜೊತೆಗೆ ತರಗತಿಯ ಅನುಭವಿ ಪ್ರಾಧ್ಯಾಪಕರ ಬೋಧನೆಯು ವಿದ್ಯಾರ್ಥಿಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿಬಿಡುತ್ತದೆ. ಅಚ್ಚುಕಟ್ಟಾಗಿ ನಡೆಸಿಕೊಡುವ ಕಾರ್ಯಕ್ರಮಗಳು ಮಹನೀಯರೆಲ್ಲ ಮಾತುಗಳನ್ನಾಡಿದ ರಂಗವೇದಿಕೆ ಕಾಲೇಜಿನ ಸುಸಜ್ಜಿತ ಕೊಠಡಿ ಗ್ರಂಥಾಲಯ ಅಣುಕು ನ್ಯಾಯಾಲಯ ಸಭಾಂಗಣದಲ್ಲಿ ಪ್ರತಿನಿತ್ಯ ನಡೆಯುವ ವಾದ ವಿವಾದಗಳು ಎಲ್ಲವೂ ಈ ಕಾಲೇಜಿನ ಭಾಗವೆಂದರೆ ತಪ್ಪಾಗಲಾರದು.
ಇನ್ನೂ ಈ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳ ವಿಚಾರಕ್ಕೆ ಬಂದರೆ ಕನ್ನಡವೇ ಬರದೇ ಇರುವ ದೇವರ ನಾಡು ಕೇರಳದಿಂದ ಪ್ರತಿ ವರ್ಷ ಹಲವಾರು ವಿದ್ಯಾರ್ಥಿಗಳು ಬಂದು ಕಾನೂನಿನ ಜೊತೆಗೆ ಕನ್ನಡವನ್ನು ಕಲಿಯುತ್ತಾರೆ ಎಂದರೆ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಹೇಗಿರಬಹುದು ಒಮ್ಮೆ ಯೋಚಿಸಿ. ಬಯಲು ಸೀಮೆಯಿಂದ ಬಹುಸಂಖ್ಯಾತ ವಿದ್ಯಾರ್ಥಿಗಳು ಮಂಡ್ಯ ಮೈಸೂರ್ ಬೆಂಗಳೂರಿನ ಜೊತೆಗೆ ಮಲೆನಾಡು ಕರಾವಳಿಯಿಂದ ಬರುವ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಉಜಿರೆ ಇವರು ವಿದ್ಯಾರ್ಥಿ ವೇತನ ನೀಡಿ ಅವರ ಶೈಕ್ಷಣಿಕ ಸಾಧನೆಗೆ ಸಹಾಯ ಮಾಡುವುದು ಈ ಕಾಲೇಜಿನ ಮತ್ತೊಂದು ವಿಶೇಷತೆ. ಕಾಲೇಜಿನಿಂದ ವಿಶ್ವವಿದ್ಯಾನಿಲಯ ಮಟ್ಟ ರಾಜ್ಯ ಮಟ್ಟ ರಾಷ್ಟ್ರಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಯಾಣ ವೆಚ್ಚ ಊಟ ಮತ್ತು ವಸತಿಯ ಸಂಪೂರ್ಣ ವೆಚ್ಚವನ್ನು ಕಾಲೇಜಿನ ಆಡಳಿತ ಮಂಡಳಿಯೇ ಭರಿಸುವುದು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವಂತೆ ಪ್ರೇರೇಪಿಸುತ್ತದೆ ಈ ನಮ್ಮ ಸುಂದರ ಕಾಲೇಜು.
ಕಾಲೇಜಿನ ಪ್ರಾಂಶುಪಾಲರಾದ ಡಾ. ತಾರಾನಾಥ್ ಎಂದಿಗೂ ವಿದ್ಯಾರ್ಥಿಗಳನ್ನು ಮತ್ತೆ ಮತ್ತೆ ಎಚ್ಚರಿಸುವ ಮಾತುಗಳಿಗೂ ಈ ಶಿಕ್ಷಣ ಸಂಸ್ಥೆ ನಿಮಗೇನು ನೀಡಿದೆ ಎನ್ನುವುದಕ್ಕಿಂತ ನೀವು ಈ ಶಿಕ್ಷಣ ಸಂಸ್ಥೆಗೆ ಏನನ್ನು ನೀಡಬಲ್ಲರಿ ಎನ್ನುವುದನ್ನು ಪ್ರತಿದಿನ ಯೋಚಿಸಿ ಆಗ ಕರ್ತವ್ಯದ ಅರಿವು ನಿಮಗಾಗಬಹುದು ನಿಮ್ಮ ನಿತ್ಯ ಕರ್ತವ್ಯವನ್ನು ನೀವು ನಿಭಾಯಿಸಿ ಮುಂದೊಂದು ದಿನ ಆ ಕರ್ತವ್ಯವೇ ನಿಮ್ಮನ್ನು ಸಮಾಜದ ಗಣ್ಯ ವ್ಯಕ್ತಿಯನ್ನಾಗಿಸುತ್ತದೆ ಎನ್ನುವ ಇವರ ಮಾತುಗಳಿಗೆ ಪುಷ್ಠಿ ನೀಡುವಂತಿದೆ ಇಲ್ಲಿಯ ಸಾಧಕರ ಪಟ್ಟಿ.
ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳು ಪ್ರಸ್ತುತ ಆಂಧ್ರಪ್ರದೇಶದ ರಾಜ್ಯಪಾಲರಾಗಿರುವ ನ್ಯಾ. ಎಸ್ ಅಬ್ದುಲ್ಲ ನಜೀರ್, ಕೇರಳ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಆಂಟೋನಿ ಡೊಮೊನಿಕ್, ಕರ್ನಾಟಕ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ನ, ಕರ್ನಾಟಕದ ವಿಧಾನಸಭಾಧ್ಯಕ್ಷ ಯುಟಿ ಖಾದರ್ ಪರಿದ್ ಮೊದಲಾದ ಮಹನೀಯರು ಒಂದಾನೊಂದು ಕಾಲದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ಸಾಧನೆಯ ಹಾದಿಗೊಂದು ದಾರಿ ದೀಪವಾಗಿದ್ದಾರೆ.
ಹೀಗೆ ಈ ಕಾಲೇಜಿನ ವೈಶಿಷ್ಟವನ್ನು ವರ್ಣಿಸುತ್ತಾ ವಿದ್ಯಾರ್ಥಿಗಳ ಸಾಧನೆಯನ್ನು ಮರು ನೆನೆಯುತ್ತಾ ಹೋದರೆ 50 ವರ್ಷಗಳ ಸಾಧನೆಯನ್ನು ಕೇವಲ ಒಂದು ಲೇಖನದಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಡಿಸೆಂಬರ್ 14 ಮತ್ತು 15 ರಂದು ಐವತ್ತು ವರ್ಷಗಳ ಸಂಭ್ರಮಾಚರಣೆ ಮಾಡುತ್ತಿರುವ ಈ ಕಾಲೇಜಿಗೆ ನಮ್ಮ ಹೆಮ್ಮೆಯ ಕಾಲೇಜಿಗೆ ನಮ್ಮದೊಂದು ಸಲಾಂ.
- ಶಂಕರ್ ಓಬಳಬಂಡಿ, ಎಸ್.ಡಿ.ಎಂ. ಕಾನೂನು ವಿದ್ಯಾರ್ಥಿ
