
ಸುಬ್ರಹ್ಮಣ್ಯನಿಗೆ ಪ್ರೀಯವಾದ ವಿಶಿಷ್ಠ್ಯಮಯ ಬೀದಿ ಉರುಳುಸೇವೆ ಆರಂಭ-ಕುಮಾರಧಾರದಿಂದ ಶ್ರೀ ದೇವಳದ ತನಕ ನಡೆಸುವ ಸೇವೆ: ರಶೀದಿ ರಹಿತವಾದ ಸ್ವಯಂಪ್ರೇರಿತ ಸೇವೆ
ಸುಬ್ರಹ್ಮಣ್ಯ: ಬೀದಿ ಉರುಳು ಸೇವೆಯು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸವದ ಸಂದರ್ಭ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ಸ್ವಯಂಸ್ಪೂರ್ತಿಯ ವಿಶಿಷ್ಠ ಸೇವೆಯಲ್ಲೊಂದಾಗಿದೆ. ಬೀದಿ ಉರುಳು ಸೇವೆಯು ಸುಬ್ರಹ್ಮಣ್ಯದಲ್ಲಿ ಲಕ್ಷದೀಪೋತ್ಸವದ ರಥೋತ್ಸವದ ಬಳಿಕ ಭಕ್ತರು ಆರಂಭಿಸಿದ್ದಾರೆ.ರಥೋತ್ಸವದ ಬಳಿಕದಿತ್ಯವಾರ ಮುಂಜಾನೆ ಸ್ವಯಂಪ್ರೇರಿತರಾಗಿ ಭಕ್ತರು ಈ ಸೇವೆಯನ್ನು ಆರಂಭಿಸಿದರು.
ಸೇವೆಗೆ ರಶೀದಿ ಇಲ್ಲ:
ಷಷ್ಠಿಯಂದು ಮಹಾರಥೋತ್ಸವ ಎಳೆಯುವ ತನಕ ಈ ಸೇವೆಯನ್ನು ಭಕ್ತರು ನೆರವೇರಿಸುತ್ತಾರೆ. ಜಾತ್ರೋತ್ಸವದ ಪ್ರಧಾನ ದಿನವಾದ ಚೌತಿ, ಪಂಚಮಿಯಂದು ಅಧಿಕ ಸಂಖ್ಯೆಯಲ್ಲಿ ಭಕ್ತರು ಈ ಸೇವೆ ನೆರವೇರಿಸುತ್ತಾರೆ. ಉರುಳು ಸೇವೆ ಮಾಡುವ ಭಕ್ತರು ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದ ರಾಜರಸ್ತೆ, ರಥಬೀದಿ ಯಲ್ಲಿ ಉರುಳಿಕೊಂಡು ದೇವಳಕ್ಕೆ ಬಂದು ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿ ಮೂಡು ಬಾಗಿಲಿನಲ್ಲಿ ಹೊರ ಹೋಗಿ ಎದುರಿನ ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಾರೆ.ಈ ಸೇವೆಗೆ ಯಾವುದೇ ರಶೀದಿ ಇಲ್ಲ. ಹಾಗಿದ್ದರೂ ಶ್ರೀ ದೇವಳದಿಂದ ಭಕ್ತರ ಅನುಕೂಲತೆಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.
ವೃತನಿಷ್ಠ ಸೇವೆ:
ಉರುಳು ಸೇವೆ ಮಾಡುವವರು ಮೊದಲೇ ಅನೇಕ ದಿನಗಳಿಂದ ವೃತವನ್ನು ಕೈಗೊಂಡಿರುತ್ತಾರೆ.ಅತ್ಯಂತ ಕಠೀಣವಾದ ಈ ಸೇವೆಯಲ್ಲಿ ಭಕ್ತರ ಅಪಾರ ಶ್ರದ್ಧೆ ಅಡಗಿದೆ. ಸುಮಾರು ೨ ಕಿ.ಮಿ ದೂರ ಕಠಿಣವಾದ ಉರುಳು ಸೇವೆ ಮಾಡಿ ತಮ್ಮ ಇಷ್ಟಾರ್ಥ ಪಲಪ್ರಧಗೊಳ್ಳಲು ಪ್ರಾರ್ಥಿಸುತ್ತಾರೆ. ಶ್ರೀ ದೇವರನ್ನು ಆರಾಧಿಸುವ ಕಠಿಣ ಹಾಗೂ ವಿಶಿಷ್ಟ ಸೇವೆ ಇದಾಗಿದ್ದು ಪುರುಷ, ಮಹಿಳೆ, ಮಕ್ಕಳು ಹಾಗೂ ವೃದ್ದರೂ ಈ ಸೇವೆಯನ್ನು ಮಾಡುತ್ತಾರೆ. ಅನೇಕ ವರ್ಷಗಳಿಂದ ಸತತವಾಗಿ ಈ ಕಠಿಣವಾದ ಸೇವೆಯನ್ನು ಸಲ್ಲಿಸುವ ಅಸಂಖ್ಯಾತ ಭಕ್ತರಿದ್ದಾರೆ.
ಮುಖ್ಯ ಹರಕೆ ಸೇವೆ:
ಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಉರುಳು ಸೇವೆ ಮುಖ್ಯ ಹರಿಕೆಗಳಲ್ಲಿ ಒಂದಾಗಿ ಪರಿಗಣಿತವಾಗಿದೆ. ಸ್ವಯಂಸ್ಪೂರ್ತಿಯಿಂದ ಈ ಸೇವೆ ಸಲ್ಲಿಸುವ ಭಕ್ತರು ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದ ರಾಜರಸ್ತೆ, ತೇರು ಬೀದಿ ಯಲ್ಲಿಯೇ ಉರುಳಿಕೊಂಡು ದೇವಳಕ್ಕೆ ಬಂದು ಉರುಳಿಕೊಂಡೇ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿ ಮೂಡು ಬಾಗಿಲಿನಲ್ಲಿ ಹೊರ ಹೋಗಿ ಎದುರಿನ ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದು ಶ್ರೀ ದೇವರ ದರ್ಶನ ಮಾಡಿ ಪ್ರಸಾದ ತೆಗೆದುಕೊಂಡು ತಮ್ಮ ಹರಕೆ ಸೇವೆಯನ್ನು ಪೂರೈಸುತ್ತಾರೆ.
ಸಂಕಷ್ಠ ನಿವಾರಣೆ:
ಈ ಸೇವೆಯಿಂದಾಗಿ ಭಕ್ತರ ಸಂಕಷ್ಠಗಳು, ರೋಗರುಜಿನಗಳು ನಿವಾರಣೆಯಾದ ಉದಾಹರಣೆಗಳಿವೆ. ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಭಕ್ತರು ಈ ಸೇವೆಯನ್ನು ಕುಮಾರಧಾರದಿಂದ ಆರಂಭಿಸುತ್ತಾರೆ. ಕೆಲವರಂತೂ ರಾತ್ರಿಯೂ ಈ ಸೇವೆಯನ್ನು ನೆರವೇರಿಸುತ್ತಾರೆ. ಇದು ಶ್ರೀ ಕ್ಷೇತ್ರದಲ್ಲಿ ಭಕ್ತರು ಸಲ್ಲಿಸುವ ಹರಕೆ ಸೇವೆಗಳಲ್ಲಿ ಒಂದಾಗಿದೆ.
ಪ್ರತ್ಯೇಕ ಪಥ:
ಶ್ರೀ ದೇವಳದಿಂದ ಆಡಳಿತ ಮಂಡಳಿಯು ಬೀದಿ ಮಡೆಸ್ನಾನ ಸೇವೆಗೆ ವಿಶೇಷ ಅನುಕೂಲತೆಗಳನ್ನು ಮಾಡಿದೆ. ಉರುಳು ಸೇವೆ ಮಾಡುವ ಭಕ್ತರಿಗೆ ಪ್ರತ್ಯೇಕ ಪಥದ ವ್ಯವಸ್ಥೆ ಮಾಡಲಾಗಿದೆ. ಕುಮಾರಧಾರದಿಂದ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಿತವಾಗಿರುವ ಕಾರಣ ಇದರಲ್ಲಿ ಒಂದು ಭಾಗವನ್ನು ಉರುಳು ಸೇವೆಗಾಗಿಯೇ ವ್ಯವಸ್ಥೆಗೊಳಿಸಲಾಗಿದೆ.ಇದರಲ್ಲಿ ವಾಹನ ಸಂಚಾರಕ್ಕೆ ಅವಕಾವಿಲ್ಲ. ಅಲ್ಲದೆ ರಸ್ತೆಯ ಇಕ್ಕೆಲದಲ್ಲಿ ವಾಹನ ನಿಲುಗಡೆಗೆ ಕೂಡಾ ಅವಕಾಶ ನೀಡಲಾಗುತ್ತಿಲ್ಲ. ಅಲ್ಲದೆ ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಸೂಚನಾ ಫಲಕಗಳನ್ನು ವ್ಯವಸ್ಥೆ ಮಾಡಲಾಗಿದೆ. ಕುಮಾರಧಾರದಿಂದ ಕುಕ್ಕೆಯ ತನಕ ವಿದ್ಯುತ್ ಸೌಕರ್ಯವನ್ನು ವ್ಯವಸ್ಥೆಗೊಳಿಸಲಾಗಿದೆ.ಅಲ್ಲದೆ ಶ್ರೀ ದೇವಳದಿಂದ ಪ್ರತಿನಿತ್ಯ ರಸ್ತೆಯನ್ನು ಗುಡಿಸಿ ಸ್ವಚ್ಚ ಮಾಡಿ ರಸ್ತೆಯಲ್ಲಿನ ದೂಳು ತೆಗೆಯುವ ಕಾರ್ಯವು ನಡೆಯಲಿದೆ.ಅಲ್ಲದೆ ಆಗಾಗ್ಗೆ ನೀರನ್ನು ಹಾಕಿ ಶುಚಿಗೊಳಿಸಲಾಗುತ್ತದೆ.ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಭಕ್ತರು ಈ ಪಥವನ್ನು ಗುಡಿಸಿ ಶುಚಿಗೊಳಿಸುವ ಕಾರ್ಯವನ್ನು ದಿನ ನಿತ್ಯ ಮಾಡುತ್ತಾರೆ.
ಸಂಜೆ ಅಥವಾ ಮುಂಜಾನೆ ವೇಳೆ ಆರಂಭಿಸಿ:
ಈ ಬಾರಿ ಕಾಂಕ್ರೀಟ್ ರಸ್ತೆಯಲ್ಲಿ ಉರುಳು ಸೇವೆ ಮಾಡಬೇಕಾದ ಕಾರಣ ಭಕ್ತರು ಸಂಜೆ 5 ಗಂಟೆಯಿಂದ ಬೆಳಗ್ಗೆ 6 ಗಂಟೆಯ ಒಳಗೆ ಸೇವೆಯನ್ನು ಆರಂಭಿಸಿ ಸಹಕರಿಸಬೇಕು.ಆದಷ್ಟು ಸಂಜೆ, ರಾತ್ರಿ ಮತ್ತು ಮುಂಜಾನೆ ವೇಳೆ ಸೇವೆಯನ್ನು ಕುಮಾರಧಾರೆಯಿಂದ ಆರಂಭಿಸಬೇಕು ಎಂದು ಶ್ರೀ ದೇವಳದ ಆಡಳಿತ ಸೇವಾರ್ಥಿಗಳಲ್ಲಿ ವಿನಂತಿಸಿದೆ.ಕುಮಾರಧಾರದಿಂದ ಸುಬ್ರಹ್ಮಣ್ಯ ತನಕ ಸೇವೆ ನೆರವೇರಿಸುವಾಗ ಬಿಸಿಲಿನ ತಾಪದಿಂದ ಭಕ್ತರಿಗೆ ತೊಂದರೆ ಆಗಬಾರದು ಎಂಬ ಮುಂದಾಲೋಚನೆಯಿಂದ ಈ ಮನವಿಯನ್ನು ಮಾಡಲಾಗಿದೆ.