ಕುಕ್ಕೆ: ಜಾತ್ರಾ ವೇಳೆ ಸ್ವಚ್ಚತೆಗೆ ಗರಿಷ್ಠ ಆಧ್ಯತೆ: ಸ್ಟ್ರೀಟ್ ಸ್ವೀಪಿಂಗ್ ಮೆಷಿನ್ನಿಂದ ಶುಚಿತ್ವ
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸಮಯದಲ್ಲಿ ಕ್ಷೇತ್ರ ಸ್ವಚ್ಚತೆಗೆ ದೇವಳವು ಹೆಚ್ಚಿನ ಆಧ್ಯತೆ ನೀಡಲಾಗಿತ್ತು. ಶ್ರೀ ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರಾ ಅವರು ಈ ಭಾರಿ ಮಂಗಳೂರಿನಿಂದ ವಿಶೇಷವಾಗಿ ಸ್ವಚ್ಚತಾ ಯಂತ್ರವನ್ನು ತರಿಸುವ ಮೂಲಕ ಗರಿಷ್ಠ ಪ್ರಮಾಣದ ಶುಚಿತ್ವಕ್ಕೆ ಮನ್ನಣೆ ನೀಡಿದ್ದರು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ರಾತ್ರಿ ವೇಳೆಯೂ ಸ್ವಚ್ಚತಾ ಕಾರ್ಯ ನಡೆಸುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ಕಾರಣದಿಂದ ನಿರಂತರ ಶುಚಿತ್ವ ಕಾರ್ಯ ಕ್ಷೇತ್ರದಲ್ಲಿ ನಡೆದು ನೈರ್ಮಲ್ಯತೆಯು ಕಂಡು ಬರುತ್ತಿದೆ.
ಜಾತ್ರೋತ್ಸವದ ಪ್ರಧಾನ ದಿನಗಳಾದ ಚೌತಿ, ಪಂಚಮಿ, ಷಷ್ಠಿ ಮತ್ತು ಅವಭೃತ ದಿನ ಕ್ಷೇತ್ರದ ರಥಬೀದಿಯಿಂದ ಕಾಶಿಕಟ್ಟೆ ತನಕ ಲಕ್ಷಾಂತರ ಮಂದಿ ಸಂಚರಿಸುವುದರಿಂದ ಈ ಸಮಯದಲ್ಲಿ ಉಂಟಾಗುವ ಕಸಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಲಕ್ಷದೀಪ, ಚೌತಿ, ಪಂಚಮಿ, ಷಷ್ಠಿ ದಿನ ರಥೋತ್ಸವ ಆರಂಭಕ್ಕೆ ಮೊದಲು ಮತ್ತು ರಥೋತ್ಸವದ ಬಳಿಕ ರಸ್ತೆಯನ್ನು ಸಂಪೂರ್ಣವಾಗಿ ಗುಡಿಸುವ ವ್ಯವಸ್ಥೆ ಮಾಡಲಾಗಿತ್ತು. ಪಂಚಮಿ ದಿನ ರಥೋತ್ಸವದ ಬಳಿಕ ಸುಮಾರು ರಾತ್ರಿ 2.30ಗಂಟೆಗೆ ರಥಬೀದಿಯನ್ನು ಸ್ವಚ್ಚವಾಗಿ ಗುಡಿಸಲಾಗಿತ್ತು.ನೀರು ಹಾಕಿ ಶುಚಿಗೊಳಿಸಲಾಗಿತ್ತು. ಲಕ್ಷದೀಪದ ಮೊದಲು ಮತ್ತು ನಂತರ ನಿರಂತರವಾಗಿ ಕುಮಾರಧಾರದಿಂದ ಗೋಪುರದ ತನಕ ದಿನದಲ್ಲಿ 2 ಭಾರಿ ರಸ್ತೆಗೆ ನೀರು ಹಾಯಿಸಿ ಸ್ವಚ್ಚತೆ ಮಾಡಲಾಗುತ್ತಿತ್ತು.
40 ಮೊಬೈಲ್ ಶೌಚಾಲಯ:
ಸುಮಾರು 100ಕ್ಕೂ ಅಧಿಕ ಡಸ್ಟ್ಬಿನ್ಗಳನ್ನು ರಥಬೀದಿಯಿಂದ ಕಾಶಿಕಟ್ಟೆ ತನಕ ಇರಿಸಲಾಗಿತ್ತು. ಕ್ಷೇತ್ರದಲ್ಲಿ ಈಗಾಗಲೇ 150ಕ್ಕೂ ಅಧಿಕ ಶಾಶ್ವತ ಶೌಚಾಲಯಗಳು ವ್ಯವಸ್ಥಿತವಾಗಿವೆ. ಇದರೊಂದಿಗೆ 40 ತಾತ್ಕಾಲಿಕ ಮೊಬೈಲ್ ಶೌಚಾಲಯಗಳನ್ನು ಕುಮಾರಧಾರ, ಕಾಶಿಕಟ್ಟೆ, ಸವಾರಿ ಮಂಟಪ ಹಾಗೂ ಪಾರ್ಕಿಂಗ್ ಸ್ಥಳ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸಮೀಪದಲ್ಲಿ ನಿರ್ಮಿಸಲಾಗಿತ್ತು. ಸ್ವಚ್ಚತೆಯ ಬಗ್ಗೆ ಆರೋಗ್ಯ ಇಲಾಖೆ ಮತ್ತು ಸ್ಥಳಿಯ ಗ್ರಾಮ ಪಂಚಾಯತ್ನ ಸಹಕಾರದಿಂದ ಜಾತ್ರಾ ವೇಳೆ ಹೆಚ್ಚಿನ ಸ್ವಚ್ಚತೆಗೆ ಕ್ರಮ ಕೈಗೊಳ್ಳಲಾಗಿತ್ತು.ಅಲ್ಲದೆ ಪ್ಲಾಸ್ಟಿಕ್ ಮತ್ತು ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ ಜಾಗೃತಿಗೆ ಅಧಿಕಾರಿಗಳು ಅಂಗಡಿಗಳಿಗೆ ದಾಳಿ ಮಾಡಿ ಜಾಗೃತಿ ಮೂಡಿಸಿದ್ದರು.
ಅಲ್ಲಲ್ಲಿ ಫಲಕಗಳು:
ಅಲ್ಲಲ್ಲಿ ಸೂಚನಾ ಫಲಕಗಳನ್ನು ಹಾಕಿ ಸ್ವಚ್ಚತೆ ಅನುಸರಿಸುವಂತೆ ಭಕ್ತರಲ್ಲಿ ಮನವಿ ಮಾಡಲಾಗಿತ್ತು. ಕಾಶಿಕಟ್ಟೆ, ರಥಬೀದಿ, ಅಡ್ಡಬೀದಿ ಮೊದಲಾದೆಡೆ ಸ್ವಚ್ಚತಾ ಜಾಗೃತಿ ಫಲಕ ಅಳವಡಿಸಿ ಜಾಗೃತಿ ಮೂಡಿಸಲಾಗಿತ್ತು.ಅಲ್ಲದೆ ಬ್ಲಿಚಿಂಗ್ ಪೌಡರ್ ಹಾಕುವುದು, ಫಾಗಿಂಗ್ ವ್ಯವಸ್ಥೆಯನ್ನು ನಿರಂತರವಾಗಿ ಮಾಡುವ ಮೂಲಕ ನೈರ್ಮಲ್ಯತೆಗೆ ಭಾಷ್ಯ ಬರೆಯಲಾಗಿತ್ತು. ಇದಲ್ಲದೆ ಜಾತ್ರಾ ವೇಳೆ ಸ್ವಚ್ಚ ಕುಡಿಯುವ ನೀರಿನ ವ್ಯವಸ್ಥೆಯನ್ಬು ಮಾಡಲಾಗಿತ್ತು.
ಸ್ವಯಂಸೇವಕರ ಸ್ವಚ್ಚತಾ ಸೇವೆ:
ಅಲ್ಲದೆ ಕುಕ್ಕೆಯ ಸ್ವಯಂ ಸೇವಕರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಕುಮಾರಧಾರದಿಂದ ಶ್ರೀ ದೇವಳದ ತನಕ ರಸ್ತೆ ಗುಡಿಸಿ ನೀರು ಹಾಯಿಸಿ ಶುಚಿಗೊಳಿಸುವ ಕಾರ್ಯವನ್ನು ಜಾತ್ರೋತ್ಸವದ ಪ್ರಧಾನಗಳಾದ ಲಕ್ಷದೀಪೋತ್ಸವ ಹಾಗೂ ಚೌತಿ ದಿನ ನಡೆಸಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 400ಕ್ಕೂ ಅಧಿಕ ಸ್ವಯಂಸೇವಕರು ಲಕ್ಷದೀಪೋತ್ಸವದ ಮೊದಲ ದಿನ ಕುಮಾರಧಾರದಿಂದ ಗೋಪುರದ ತನಕ ರಸ್ತೆಯನ್ನು ಗುಡಿಸಿ ಬೀದಿ ಮಡೆಸ್ನಾನ ಮಾಡುವ ಭಕ್ತರಿಗೆ ಅನುಕೂಲವಾಗುವಂತೆ ಮಾಡಿದ್ದರು.ಅಲ್ಲದೆ ಶ್ರೀ ದೇವಳದ ಸಿಬ್ಬಂದಿ ವರ್ಗವೂ ಉರುಳು ಸೇವೆ ಪಥವನ್ನು ಗುಡಿಸಿ ಸ್ವಚ್ಚಗೊಳಿಸುವ ಕಾರ್ಯವನ್ನು ನಡೆಸಿದ್ದರು.
ಸ್ವಚ್ಚತೆಗೆ 40 ಕಾರ್ಮಿಕರು:
ಶ್ರೀ ದೇವಳದ ಜಾತ್ರೋತ್ಸವದ ಆರಂಭಿಕ ದಿನವಾದ ನ.27ರಿಂದ ಡಿ.12ರ ತನಕ ಹೊರಭಾಗದಿಂದ ಕರೆಸಲ್ಪಟ್ಟ ಮತ್ತು ಶ್ರೀ ದೇವಳದ ಸ್ವಚ್ಚತಾ ಕಾರ್ಮಿಕರು ನಿರಂತರವಾಗಿ ಕ್ಷೇತ್ರ ಸ್ವಚ್ಚತೆ ನಡೆಸಲಿದ್ದಾರೆ. ಈಗಾಗಲೇ ತಮ್ಮ ಕರ್ತವ್ಯವನ್ನು ಉತ್ಕೃಷ್ಠವಾಗಿ ಇವರು ನಿರ್ವಹಿಸಿದ್ದಾರೆ. ಕುಕ್ಕೆ ದೇವಳದ ಆರೋಗ್ಯ ನಿರೀಕ್ಷಕ ಯೋಗೀಶ್ ಎಂ. ವಿಟ್ಲ ಅವರ ಮಾರ್ಗದರ್ಶನ ಮತ್ತು ಸಲಹೆ ಮೂಲಕ ಶ್ರೀ ಕ್ಷೇತ್ರದ ರಥಬೀದಿಯಿಂದ ಕಾಶಿಕಟ್ಟೆ ತನಕ, ಪಾರ್ಕಿಂಗ್ ಸ್ಥಳ, ಆದಿ ಸುಬ್ರಹ್ಮಣ್ಯ ಮೊದಲಾದೆಡೆ ಗರಿಷ್ಠ ಶುಚಿತ್ವಕ್ಕೆ ಶ್ರಮ ವಹಿಸಿದ್ದಾರೆ.ಸುಳ್ಯದಿಂದ 21 ಜನ ಪೌರ ಕಾರ್ಮಿಕರನ್ನು ಕರೆಸಿಕೊಳ್ಳಲಾಗಿದೆ. ಶ್ರೀ ದೇವಳದ ವತಿಯಿಂದ ನಿತ್ಯ ಶುಚಿತ್ವಕ್ಕೆ ನೇಮಕಗೊಂಡಿರುವ 19 ಕಾರ್ಮಿಕರು ಒಟ್ಟಾಗಿ ಶುಚಿತ್ವ ಕಾರ್ಯದಲ್ಲಿ ಕರಜೋಡಿಸಿ ಜಾತ್ರಾ ವೇಳೆ ಗರಿಷ್ಠ ಶುಚಿತ್ವ ಕಾಪಾಡಲು ಶ್ರಮ ವಹಿಸಿದ್ದರು.

