
ಇಎಸ್ಐ ವೇತನ ಮಿತಿ ಏರಿಕೆಗೆ ಮನವಿ
Friday, December 6, 2024
ಉಡುಪಿ: ಖಾಸಗಿ ರಂಗದ ಕಾರ್ಮಿಕರು ಮತ್ತು ಉದ್ಯೋಗಿಗಳಿಗೆ ಇಎಸ್ಐ ಸೌಲಭ್ಯದ ವೇತನ ಮಿತಿಯನ್ನು 30 ಸಾವಿರ ಏರಿಕೆ ಮಾಡುವಂತೆ ಶಾಸಕ ಯಶಪಾಲ್ ಸುವರ್ಣ ಈಚೆಗೆ ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಮಾಡಿದರು.
ಈ ಹಿಂದಿದ್ದ 15 ಸಾವಿರ ವೇತನ ಮಿತಿಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 21 ಸಾವಿರಕ್ಕೆ ಏರಿಕೆ ಮಾಡಿ ದೇಶದ ಕೋಟ್ಯಾಂತರ ಕಾರ್ಮಿಕರು ಮತ್ತು ಉದ್ಯೋಗಿಗಳು ಹಾಗೂ ಅವರ ಕುಟುಂಬಕ್ಕೆ ಯೋಜನೆ ಮೂಲಕ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಿತ್ತು. ಕಳೆದ 8 ವರ್ಷದಿಂದ ಇಎಸ್ಐ ಸೌಲಭ್ಯಕ್ಕೆ ಅರ್ಹ ವೇತನ ಮಿತಿ ಏರಿಕೆಯಾಗದ ಕಾರಣ 21 ಸಾವಿರ ರೂ. ಮೇಲ್ಪಟ್ಟ ವೇತನ ಶ್ರೇಣಿಯ ಕಾರ್ಮಿಕರು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.
ವರ್ಷದಿಂದ ವರ್ಷಕ್ಕೆ ಖಾಸಗಿ ಕ್ಷೇತ್ರದಲ್ಲಿ ನೀಡಲಾಗುವ ವಾರ್ಷಿಕ ಭಡ್ತಿ, ಬೆಲೆ ಏರಿಕೆ ಅನುಗುಣವಾಗಿ ವೇತನ ಏರಿಕೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರ ಪ್ರಸ್ತುತ ಇರುವ 21 ಸಾವಿರ ವೇತನ ಮಿತಿಯನ್ನು 30 ಸಾವಿರಕ್ಕೆ ಏರಿಕೆ ಮಾಡಿದರೆ ಕಾರ್ಮಿಕ ವರ್ಗಕ್ಕೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ಸಚಿವರಿಗೆ ಮನವಿ ಮಾಡಿದರು.
ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವೆ ಶೋಭಾ ಕರಂದ್ಲಾಜೆ ದೇಶದ ಕಾರ್ಮಿಕರ ಹಿತದೃಷ್ಟಿಯಿಂದ ಯೋಜನೆಯ ವೇತನ ಮಿತಿ ಏರಿಕೆಗೆ ಕ್ರಮ ವಹಿಸುವ ಭರವಸೆ ನೀಡಿದರು.