
ಎಸ್.ಡಿ.ಎಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ: 25 ವರ್ಷಗಳ ಹಿಂದೆ ಕಲಿತ ಹಿರಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಮಾವೇಶ
ಉಜಿರೆ: 25 ವರ್ಷಗಳ ಹಿಂದೆ ಅಂದರೆ, 1996-1999ರ ಅವಧಿಯಲ್ಲಿ ಉಜಿರೆಯಲ್ಲಿರುವ ಎಸ್.ಡಿ.ಎಂ. ಸೆಕೆಂಡರಿ ಶಾಲೆ ಮತ್ತು ರತ್ನಮಾನಸ ವಿದ್ಯಾರ್ಥಿನಿಲಯದಲ್ಲಿ ಎಂಟನೆ ತರಗತಿಯಿಂದ ಎಸ್.ಎಸ್.ಎಲ್.ಸಿ. ವರೆಗೆ ಶಿಕ್ಷಣ ಪೂರೈಸಿದ ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರ ಸಮಾವೇಶ ಹಾಗೂ ‘ಗುರುವಂದನ’ ಕಾರ್ಯಕ್ರಮ ಶನಿವಾರ ಶಾಲೆಯ ಸಭಾಭವನದಲ್ಲಿ ನಡೆಯಿತು.
ಸಮಾರಂಭದ ಎಲ್ಲಾ ವ್ಯವಸ್ಥೆಗಳನ್ನು ಹಿರಿಯ ವಿದ್ಯಾರ್ಥಿಗಳೆ ಸ್ವಯಂ ಪ್ರೇರಿತರಾಗಿ ಆಯೋಜಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸುರೇಶ್, ಕೆ. ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಹಿರಿಯ ವಿದ್ಯಾರ್ಥಿಗಳಾದ ಮಂಜನಾಯ್ಕ, ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ಉಜಿರೆಯ ವಿಲಾಸ್ ಆರ್. ನಾಯಕ್ ಮತ್ತು ಪವಿತ್ರ ಶೆಣೈ ತಮ್ಮ ವಿದ್ಯಾರ್ಥಿ ಜೀವನದ ಸಿಹಿ-ಕಹಿ ಅನುಭವಗಳನ್ನು ಭಾವಪೂರ್ಣವಾಗಿ ವಿವರಿಸಿದರು.
ಹಿರಿಯ ಶಿಕ್ಷಕರಾದ ಶಂಕರನಾರಾಯಣ ರಾವ್, ಬಿ. ಜನಾರ್ದನ, ಮೋಹನ ಎಸ್. ಜೈನ್, ಸದಾಶಿವ ಪೂಜಾರಿ, ಕಲಾವತಿ ಸಿ.ಎಚ್., ಆರ್.ಎನ್. ಪೂವಣಿ, ಎನ್. ಪದ್ಮರಾಜು, ರಮೇಶ ಮಯ್ಯ, ವಿ.ಕೆ. ವಿಟ್ಲ, ಕೃಷ್ಣ ಶೆಟ್ಟಿ ತಮ್ಮ ಅನಿಸಿಕೆ, ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರು 75 ಮಂದಿ ಹಿರಿಯ ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸಿದ್ದು ಎಲ್ಲಾ ಗುರುವೃಂದದವರಿಗೆ ‘ಗುರುನಮನ’ ಸಮರ್ಪಿಸಿದರು. ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ವಿಲಾಸ್ ಆರ್. ನಾಯಕ್‌ರನ್ನು ಗೌರವಿಸಲಾಯಿತು.
ಪುನೀತಾ ಸ್ವಾಗತಿಸಿದರು. ಶ್ವೇತಾ ಪೈ ಧನ್ಯವಾದವಿತ್ತರು. ಗಾಯತ್ರಿ, ಪಿ. ಕಾರ್ಯಕ್ರಮ ನಿರ್ವಹಿಸಿದರು.