
ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಧರ್ಮಸ್ಥಳ ಭೇಟಿ
Monday, December 23, 2024
ಉಜಿರೆ: ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸೋಮವಾರ ಸಕುಟುಂಬಿಕರಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರೊಡನೆ ಮಾತುಕತೆ ನಡೆಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಒಂದು ಸಾವಿರ ಕೆರೆಗಳ ಪುನಶ್ಚೇತನ ಹಾಗೂ ಸಂಸದರ ನಿಧಿಯಿಂದ ಬೀದರ್ ಜಿಲ್ಲೆಗೆ ಹೈನುಗಾರಿಕೆ ಅಭಿವೃದ್ಧಿಗೆ ಹೆಗ್ಗಡೆಯವರು ನೀಡಿದ ನೆರವಿನ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ ಹೆಗ್ಗಡೆಯವರನ್ನು ಅಭಿನಂದಿಸಿದರು.
ಕಾಡುಪ್ರಾಣಿಗಳು ನಾಡಿಗೆ ಬಂದು ಕೃಷಿಗೆ ಹಾನಿ ಮಾಡುವುದನ್ನು ತಡೆಯಲು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಹೆಗ್ಗಡೆಯವರು ಪ್ರಾರಂಭಿಸಿದ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಯೋಜನೆ ಬಗ್ಯೆಯೂ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ನಿ ಗೀತಾ ಖಂಡ್ರೆ, ಮಗ ಬೀದರ್ ಸಂಸದ ಸಾಗರ್ ಖಂಡ್ರೆ ಮತ್ತು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಬಳಿಕ ಸಚಿವರು ದೇವರ ದರ್ಶನ ಮಾಡಿ ವಿಶೆಷ ಪೂಜೆ ಸಲ್ಲಿಸಿದರು. ಭೋಜನದ ಬಳಿಕ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸಿದರು.