
ನಾಳೆ ನೂತನ ಮೆಸ್ಕಾಂ ಉಪ ಕೇಂದ್ರದ ಪರೀಕ್ಷಾರ್ಥ ಚಾಲನೆ
ಉಳ್ಳಾಲ: ಕೋಟೆಕಾರ್‌ನಲ್ಲಿ ಮೆಸ್ಕಾಂ ವತಿಯಿಂದ ಒಂಬತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ 33ಕೆವಿ, 8 ಯ.ವಿ.ಎ ಸಾಮಾರ್ಥ್ಯದ ಉಪ ಕೇಂದ್ರದ ಪರೀಕ್ಷಾರ್ಥ ಚಾಲನೆ ಡಿಸೆಂಬರ್ 24 ರಂದು ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರ ಸಮ್ಮುಖದಲ್ಲಿ ನಡೆಯಲಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.
ಅವರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತವಾಗಿ ಕೀನ್ಯಾ ತಲಪಾಡಿ ಮತ್ತು ಮಾಡೂರು ಪ್ರದೇಶಗಳಿಗೆ 110 ಕೆವಿ ಕೊಣಾಜೆ ಉಪ ಕೇಂದ್ರದಿಂದ ಮತ್ತು ಕೋಟೆಕಾರ್, ಸೋಮೇಶ್ವರ ಪ್ರದೇಶಗಳಿಗೆ 33 ಕೆವಿ ವಿದ್ಯುತ್ ತೊಕೊಟ್ಟು ಉಪಕೇಂದ್ರದಿಂದ ಸರಬರಾಜು ವ್ಯವಸ್ಥೆ ಮಾಡಲಾಗಿದೆ.
ವಿದ್ಯುತ್ ಮಾರ್ಗಗಳ ಓವರ್ ಲೋಡ್‌ನಿಂದ ಕೆಲವು ಸಂದರ್ಭಗಳಲ್ಲಿ ವಿದ್ಯುತ್ ಕಡಿತ ಉಂಟಾಗುತ್ತಿದ್ದು, ಕೋಟೆಕಾರ್ನಲ್ಲಿ ನೂತನವಾಗಿ ನಿರ್ಮಾಣವಾದ ಉಪ ಕೇಂದ್ರ ಚಾಲನೆಗೊಂಡ ಬಳಿಕ ಹಾಲಿ ಇರುವ ವಿದ್ಯುತ್ ಉಪ ಕೇಂದ್ರಗಳ ವಿದ್ಯುತ್ ಹೊರೆ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕಿನ್ಯಾ, ತಲಪಾಡಿ, ಕೋಟೆಕಾರ್ ಪ್ರದೇಶಗಳಲ್ಲಿ ಉತ್ತಮ ರೀತಿಯಲ್ಲಿ ವಿದ್ಯುತ್ ಸರಬರಾಜು ಲಭ್ಯವಾಗಲಿದೆ. ಉಳ್ಳಾಲ ತಾಲೂಕಿನಲ್ಲೂ ಉತ್ತಮ ರೀತಿಯಲ್ಲಿ ವಿದ್ಯುತ್ ಸರಬರಾಜು ಸಾಧ್ಯ ಆಗುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಮಾತನಾಡಿ, ಈಗಾಗಲೇ ಮೆಸ್ಕಾಂ ಕೊಣಾಜೆ ಉಪ ವಿಭಾಗ ಆರಂಭ ಗೊಂಡಿದ್ದು, ಇದೀಗ ನೂತನ ಸೋಮೆಶ್ವರ ಶಾಖಾ ಕಚೇರಿ ಕೊಲ್ಕ ಕುಲಾಲ ಭವನದ ಬಳಿ ಪ್ರಾರಂಭಗೊಂಡಿದೆ. ಡಿ.24 ರಂದು ನಾಟೆಕಲ್ ಎಂಬಲ್ಲಿ ನೂತನ ಕಿನ್ಯಾ ಶಾಖಾ ಕಚೇರಿ ಪ್ರಾರಂಭಗೊಳ್ಳಲಿದೆ. ಈ ಶಾಖಾ ಕಚೇರಿಯ ವ್ಯಾಪ್ತಿಗೆ ಮಂಜನಾಡಿ ಮತ್ತು ಕಿನ್ಯಾ ಗ್ರಾಮಗಳು ಒಳಪಡುತ್ತದೆ. ಈ ಪ್ರದೇಶದ ಜನರಿಗೆ ವಿದ್ಯುತ್ ಸಂಬಂಧಿತ ಸೇವೆಗಳು ಲಭ್ಯವಾಗಲಿದೆ ಎಂದು ಹೇಳಿದರು.
ಉಳ್ಳಾಲ ನಗರ ಸಭೆ ವಿದ್ಯುತ್ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆಗೆ ಸರ್ಕಾರ ದಿಂದ 200 ಕೋಟಿ ಬಿಡುಗಡೆಯಾಗಿದೆ. ಮುಗೇರ್‌ನಿಂದ ಚೆಂಬು ಗುಡ್ಡೆ ವರೆಗೆ ಅಂಡರ್ ಗ್ರೌಂಡ್ ಕೇಬಲ್ ಕಾಮಗಾರಿ ಚಾಲ್ತಿಯಲ್ಲಿದೆ. ಜೊತೆಗೆ ಶಾಸಕರ ಅನುದಾನದಲ್ಲಿ ನದಿಯಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಅಶ್ರಫ್ ಕೆಸಿರೋಡ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಮಂಚಿಲ, ಸದಸ್ಯ ಫೀಯ್ಯೂಸ್ ಡಿ’ಸೋಜ ಉಪಸ್ಥಿತರಿದ್ದರು.