
ಸಿಲಿಂಡರ್ ಸ್ಫೋಟ: ಪರಿಹಾರಕ್ಕೆ ಸಿಪಿಐಎಂ ಆಗ್ರಹ
ಉಳ್ಳಾಲ: ಮಂಜನಾಡಿ ಗ್ರಾಮದ ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಪೋಟದಿಂದ ಉಂಟಾದ ಅವಘಡದಲ್ಲಿ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರಾವಸ್ಥೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕುಟುಂಬಕ್ಕೆ ರಾಜ್ಯ ಸರಕಾರ ಪರಿಹಾರ ಧನ ವಿತರಿಸಬೇಕು, ಗಾಯಾಳುಗಳಿಗೆ ಚಿಕಿತ್ಸೆ ಒದಗಿಸುವ ಜೊತೆಗೆ ಚಿಕಿತ್ಸಾ ವೆಚ್ಚ ಭರಿಸಬೇಕು ಎಂದು ಸಿಪಿಐಎಂ ಮುಡಿಪು ವಲಯ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಡಿಸೆಂಬರ್ ಪ್ರಥಮ ವಾರ ನಡೆದ ಮಂಜನಾಡಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ತಾಯಿ, ಮಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನಿಬ್ಬರು ಬಾಲಕಿಯರು ತೀವ್ರ ಸುಟ್ಟ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಗಂಭೀರ ಪ್ರಕರಣದಲ್ಲಿ ರಾಜ್ಯ ಸರಕಾರ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಧನ ಘೋಷಿಸದಿರುವುದು, ಚಿಕಿತ್ಸಾ ವೆಚ್ಚದ ಕುರಿತು ಮಾತನಾಡದಿರುವುದು ಖೇದಕರ. ಈ ಘಟನೆಯ ತರುವಾಯ ಹುಬ್ಬಳ್ಳಿಯಲ್ಲಿ ಇದೇ ಮಾದರಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಇಬ್ಬರು ಮೃತ ಪಟ್ಟಿದ್ದಾರೆ. ಆ ದುರಂತದಲ್ಲಿ ಮೃತ ಪಟ್ಟವರ ಕುಟುಂಬಕ್ಕೆ ರಾಜ್ಯ ಸರಕಾರ ತಲಾ ಐದು ಲಕ್ಷ ರೂಪಾಯಿ ಪರಿಹಾರ ಧನ ವಿತರಿಸಿದೆ. ಗಾಯಾಳುಗಳ ಚಿಕಿತ್ಸೆಯ ಜವಾಬ್ದಾರಿಯನ್ನೂ ಹೊತ್ತು ಕೊಂಡಿದೆ. ಆದರೆ, ಅಷ್ಟೆ ತೀವ್ರತೆಯ ಮಂಜನಾಡಿ ದುರಂತದ ಸಂತ್ರಸ್ತರಿಗೆ ರಾಜ್ಯ ಸರಕಾರ ಯಾವುದೇ ಪರಿಹಾರ ಧನ ಘೋಷಿಸಿಲ್ಲ. ಮಂಜನಾಡಿ ದುರಂತದಲ್ಲಿ ಮೃತ ಪಟ್ಟವರಿಗೂ ರಾಜ್ಯ ಸರಕಾರವು ಹುಬ್ಬಳ್ಳಿ ಪ್ರಕರಣದ ಮಾದರಿಯಲ್ಲಿ ತಕ್ಷಣವೇ ಪರಿಹಾರ ಧನ ವಿತರಿಸಬೇಕು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆಯ ಜೊತೆಗೆ ಆಸ್ಪತ್ರೆಯ ವೆಚ್ಚವನ್ನು ಭರಿಸಬೇಕು ಎಂದು ಸಿಪಿಐಎಂ ಮುಡಿಪು ವಲಯ ಸಮಿತಿಯು ರಾಜ್ಯ ಸರಕಾರವನ್ನು ಆಗ್ರಹಿಸಿದೆ ಎಂದು ಸಿಪಿಐಎಂ ಮುಡಿಪು ವಲಯ ಸಮಿತಿ ಕಾರ್ಯದರ್ಶಿ ರಫೀಕ್ ಹರೇಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.