ಕೇಂದ್ರ ಸರಕಾರದಿಂದ ಸಿಆರ್‌ಐಎಫ್ ಅನುದಾನ: ಬಂಟ್ವಾಳ ಕ್ಷೇತ್ರದ ಮೂರು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಸಂಸದ ಕ್ಯಾ. ಚೌಟ

ಕೇಂದ್ರ ಸರಕಾರದಿಂದ ಸಿಆರ್‌ಐಎಫ್ ಅನುದಾನ: ಬಂಟ್ವಾಳ ಕ್ಷೇತ್ರದ ಮೂರು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಸಂಸದ ಕ್ಯಾ. ಚೌಟ


ಬಂಟ್ವಾಳ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿಯಿಂದ ದ.ಕ. ಲೋಕಸಭಾ ಕ್ಷೇತ್ರಕ್ಕೆ 42 ಕೋ.ರೂ. ಅನುದಾನ ಬಂದಿದ್ದು, ಅದರಲ್ಲಿ 6 ಕೋ.ರೂ.ಗಳನ್ನು ಬಂಟ್ವಾಳ ತಾಲೂಕಿಗೆ ನೀಡಲಾಗಿದ್ದು, ಬಂಟ್ವಾಳ ಕ್ಷೇತ್ರದಲ್ಲಿ 5.27 ಕೋ.ರೂ.ಗಳಲ್ಲಿ ಬಹಳ ಬೇಡಿಕೆ ಇರುವ ಮೂರು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು. 

ಅವರು ಸಿಆರ್‌ಐಎಫ್ ನಿಧಿಯಿಂದ ಬಂಟ್ವಾಳದ ಮೂರು ರಸ್ತೆಗಳಿಗೆ ಸಾಲೆತ್ತೂರು, ಕಲ್ಲಡ್ಕ ಹಾಗೂ ಪಚ್ಚಿನಡ್ಕದಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಬಂಟ್ವಾಳ ಕ್ಷೇತ್ರದಲ್ಲಿ ಪೊಳಲಿ-ಪಚ್ಚಿನಡ್ಕ ರಸ್ತೆಯ 3.33 ಕಿ.ಮೀ.ಗೆ 2 ಕೋ.ರೂ., ಕಲ್ಲಡ್ಕ-ವೀರಕಂಭ ರಸ್ತೆಯ 2.25 ಕಿ.ಮೀ.ಗೆ 1.35 ಕೋ.ರೂ. ಹಾಗೂ ಸಾಲೆತ್ತೂರು-ಕಟ್ಟತ್ತಿಲ ರಸ್ತೆಯ 3.2 ಕಿ.ಮೀ.ಗೆ 1.32 ಕೋ.ರೂ.ಗಳಲ್ಲಿ ಕಾಮಗಾರಿ ನಡೆಯಲಿದೆ. ಸಿಆರ್‌ಎಫ್‌ನಿಂದ ಮುಂದೆ ಇನ್ನೂ ಹೆಚ್ಚಿನ ಅನುದಾನಕ್ಕೆ ಮನವಿ ನೀಡಲಾಗಿದ್ದು, ಹೆಚ್ಚಿನ ಪ್ರಸ್ತಾವನೆ ನೀಡಿದರೆ ಅನುದಾನ ಭರವಸೆ ನೀಡಿದ್ದಾರೆ. ರಾಜ್ಯ ಸರಕಾರವು ಯಾವುದೇ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಅನುದಾನದ ಮೇಲೆ ಅವಲಂಬಿತ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ರಸ್ತೆ ಕಾಮಗಾರಿಗಳಿಗೆ ಅನುದಾನ ನೀಡುವುದು ಶಾಸಕರು, ಸಂಸದರ ಜವಾಬ್ದಾರಿಯಾದರೂ ಕಾಮಗಾರಿ ಸರಿಯಾಗಿ ನಡೆದಿದೆಯೇ ಎಂದು ಸ್ಥಳೀಯರು ಗಮನಹರಿಸಬೇಕು. ಎಂಜಿನಿಯರ್‌ಗಳು ಕೂಡ ಎಚ್ಚರಿಕೆ ವಹಿಸಿ ಗುತ್ತಿಗೆದಾರರು ಸಮರ್ಪಕವಾಗಿ ಕಾಮಗಾರಿ ನಿರ್ವಹಿಸುವ ಕುರಿತು ನೋಡಿಕೊಳ್ಳಬೇಕು ಎಂದರು.

ವಿವಿಧ ಕಡೆಯ ಶಿಲಾನ್ಯಾಸ ಸಮಾರಂಭದಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ, ಸುದರ್ಶನ್ ಬಜ, ಉಪಾಧ್ಯಕ್ಷರಾದ ಪುಷ್ಪರಾಜ್ ಚೌಟ, ರವೀಶ್ ಶೆಟ್ಟಿ ಕರ್ಕಳ, ಜಿಲ್ಲಾ ಕಾರ್ಯದರ್ಶಿಗಳಾದ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಬಿಜೆಪಿ ಮುಖಂಡರಾದ ಮೋನಪ್ಪ ದೇವಸ್ಯ, ಜಯರಾಮ್ ರೈ ಬೊಳಂತೂರು, ವಿಕಾಸ್ ಪುತ್ತೂರು, ಲಖಿತಾ ಆರ್ ಶೆಟ್ಟಿ, ಹರೀಶ್ ಟೈಲರ್, ಅರವಿಂದ ರೈ, ವಿಧೇಶ್ ರೈ, ತಾ.ಪಂ. ಸದಸ್ಯರಾದ ನಾರಾಯಣ ಶೆಟ್ಟಿ, ಯಶವಂತ ಪೊಳಲಿ, ಗೋಳ್ತಮಜಲು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷ ವಿಜಯಕುಮಾರ್, ಶುಭ ಸಮೂಹದ ಮಾಲಕ ಭುವನೇಶ್ ಪಚ್ಚಿನಡ್ಕ, ಎಂಜಿನಿಯರ್ ಜೀತೇಂದ್ರ ಉಪಸ್ಥಿತರಿದ್ದರು.

ಮಾಧವ ಮಾವೆ ಸ್ವಾಗತಿಸಿದರು. ಶಶಿಧರ ರೈ ವಂದಿಸಿದರು. ರಾಜಾರಾಮ್ ಹೆಗ್ಡೆ, ಜಿನೇಂದ್ರ ಕೋಟ್ಯಾನ್, ಶೇಖರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article