
ಕೊರಗ ಸಮುದಾಯದ ಸಮಸ್ಯೆ ಪರಿಹಾರಕ್ಕೆ ಯತ್ನ, ಖುದ್ದು ತಾನೆ ಮನೆಗಳಿಗೆ ಭೇಟಿ: ಶಾಸಕ ನಾಯ್ಕ್ ಭರವಸೆ
ಬಂಟ್ವಾಳ: ಬಂಟ್ವಾಳ ಕ್ಷೇತ್ರದಲ್ಲಿ ವಾಸ್ತವ್ಯವಿರುವ ಕೊರಗ ಸಮುದಾಯದ ಕುಟುಂಬಗಳಿಗೆ ಮನೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡದ ಜತೆಗೆ ಖುದ್ದು ತಾನೇ ಪ್ರತೀ ಮನೆಗಳಿಗೂ ಮುಂದಿನ ತಿಂಗಳು ಭೇಟಿ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಭರವಸೆ ನೀಡಿದರು.
ಬಂಟ್ವಾಳ ತಾ.ಪಂ. ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆದ ಕೊರಗ ಸಮುದಾಯದ ಮುಖಂಡರು, ತಾಲೂಕಿನ ನಿವಾಸಿಗಳೊಂದಿಗೆ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕರು ಈ ಭರವಸೆ ನೀಡಿದ್ದಾರೆ.
ತಾಲೂಕಿನಲ್ಲಿ ಸುಮಾರು 86 ಕೊರಗ ಕುಟುಂಬಗಳಿದ್ದರೂ, ಅದರಲ್ಲಿ ಒಂದಷ್ಟು ಕುಟುಂಬಗಳು ಪುತ್ತೂರು ಮತ್ತು ಮಂಗಳೂರು ಕ್ಷೇತ್ರ ವ್ಯಾಪ್ತಿಗೆ ಸೇರಿದ್ದಾರೆ. ಮೂಲಸೌಕರ್ಯಗಳಿಗೆ ಅನುದಾನ ಹೊಂದಿಸಿಕೊಳ್ಳುವ ಅಗತ್ಯವಿದ್ದರೆ ಅದಕ್ಕೂ ಪ್ರಯತ್ನಿಸಲಾಗುವುದು ಎಂದರು.
ಕೊರಗ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸುವ ನಿಟ್ಟಿನಲ್ಲಿ ಪಾಣೆಮಂಗಳೂರಿನಲ್ಲಿ 11 ಸೆಂಟ್ಸ್ ಜಾಗ ಮೀಸಲಿರಿಸಿ ಪುರಸಭೆಯಿಂದ ನಿರಾಕ್ಷೇಪಣಾ ಪತ್ರವನ್ನೂ ಪಡೆಯಲಾಗಿದ್ದರೂ ಇನ್ನೂ ಕೂಡ ಹಕ್ಕುಪತ್ರ ಸಿಕ್ಕಿಲ್ಲ, ಗ್ರಾಮಪಂಚಾಯತ್ ಗಳಲ್ಲಿ ಪರಿಶಿಷ್ಟ ಜಾತಿ ಪಂಗಡಕ್ಕೆ ಮೀಸಲಿಡುವ ಶೇ.25 ರ ಅನುದಾನದಲ್ಲಿ ಒಂದಂಶವನ್ನು ಕೊರಗ ಸಮುದಾಯಕ್ಕೆ ಮೂಲಭೂತ ಸೌಕರ್ಯ ಒದಗಿಸಲು ವಿನಿಯೋಗಿಸಬೇಕು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಕೆ.ಪುತ್ರನ್ ಸಭೆಯ ಗಮನಸೆಳೆದರು.
ಕೊರಗ ಕುಟುಂಬಗಳು ಸರಕಾರಿ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ಆದರೆ ದಾಖಲೆಗಳು ಅವರ ಹೆಸರಿನಲ್ಲಿ ಇಲ್ಲದೆ ಇರುವುದರಿಂದ ನರೇಗಾ ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಕೊರಗ ಕುಟುಂಬಗಳು ಸಭೆಯಲ್ಲಿ ಅಳಲನ್ನು ತೋಡಿಕೊಂಡರು. ನೀವು ಸರಿಯಾದ ಮಾದರಿಯಲ್ಲಿ ಅರ್ಜಿ ಹಾಕಿ ಮುಂದಿನ ದಿನಗಳಲ್ಲಿ ಆದ್ಯತೆಯ ನೆಲೆಯಲ್ಲಿ ಹಕ್ಕುಪತ್ರ ನೀಡುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕರು ಹೇಳಿದರು.
ತಾಲೂಕಿನ 18 ಕುಟುಂಬಗಳು ನಿವೇಶನಕೋರಿ ಒಂದೂವರೆ ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದು, ಭೂಮಿಯೇ ಇಲ್ಲ ಎಂಬ ಉತ್ತರ ಬರುತ್ತದೆ ಎಂದು ಪುತ್ರನ್ ಸಭೆಗೆ ತಿಳಿಸಿದರು. ವೀರಕಂಭ, ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿ, ಕೇಪು ಅಜಿನಡ್ಕ ಪುಣಚ, ಕರೋಪಾಡಿ, ಚೆನ್ನೈತ್ತೋಡಿ ಗ್ರಾಮದ ಕೊರಗ ಕುಟುಂಬಗಳ ಮನೆಯ ಸಮಸ್ಯೆಯ ಕುರಿತು ಸಭೆಯ ಗಮನಕ್ಕೆ ತಂದರು.
ಕನ್ಯಾನ ಗ್ರಾಮದಲ್ಲಿ ಹಿಂದೆ ಕೊರಗ ಕುಟುಂಬಗಳು ವಾಸವಿದ್ದ 3 ಎಕರೆ ಜಾಗದ ಮರಗಳನ್ನು ಕದ್ದು ಮಾರಾಟ ಮಾಡಲಾಗುತ್ತಿದ್ದು, ಈ ಕುರಿತು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸುಂದರಿ ಕನ್ಯಾನ ಸಭೆಯ ಗಮನಕ್ಕೆ ತಂದರು.
ಕೊರಗ ಕುಟುಂಬಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ ಅವುಗಳ ಅವಧಿ ಮುಗಿದಿದ್ದರೆ, ಹೊಸ ದಾಖಲೆ ಮಾಡಿಕೊಡುವಂತೆ ಸಮುದಾಯದ ಜಿಲ್ಲಾಧ್ಯಕ್ಷ ಸುಂದರ ಅವರು ವಿನಂತಿಸಿದರು. ಮನೆ ದುರಸ್ತಿಯ ಬೇಡಿಕೆಗಳು ಸಭೆಯಲ್ಲಿ ಕೇಳಿಬಂದಾಗ ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ಹಾಕುವಂತೆ ಇಲಾಖೆಯ ಸಹಾಯಕ ನಿರ್ದೇಶಕಿ ಸೂಚಿಸಿದರು. ತಾಲೂಕು ಸಂಘದ ಅಧ್ಯಕ್ಷನವೀನ್, ಒಕ್ಕೂಟದ ಪ್ರಧಾನ-ಕಾರ್ಯದರ್ಶಿ ಶೀಲ ಆನಂತಾಡಿ ಉಪಸ್ಥಿತರಿದ್ದರು.
ಕಾಟಾಚಾರಕ್ಕೆ ಸಭೆ ನಡೆಯುತ್ತಿದೆಯೆ?:
ಕೊರಗ ಸಮುದಾಯದ ತ್ರೈಮಾಸಿಕ ಸಭೆ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಈ ಸಭೆಯಲ್ಲಿ ಸಮಾಜಕಲ್ಯಾಣ ಇಲಾಖಾಧಿಕಾರಿಗಳು ಭಾಗವಹಿಸುತ್ತಾರೆ. ಆ ಸಭೆಯಲ್ಲು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಬಹುತೇಕ ವಿಷಯಗಳು ಅಲ್ಲು ಚರ್ಚೆಯಾಗುತ್ತದೆ ವಿನಹ ಇದುವರೆಗೂ ಕೊರಗ ಸಮುದಾಯದ ಮೂಲಭೂತ ಸೌಕರ್ಯ ಒದಗಿಸುವುದು ಸಹಿತ ನಿವೇಶನ, ಹಕ್ಕಪತ್ರ ಸಮಸ್ಯೆಯನ್ನು ಇನ್ನು ಪರಿಹರಿಸಲು ಸಾಧ್ಯವಾಗದಿರುವುದು ಬಂಟ್ವಾಳ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.
ಶಾಸಕರ ಸಭೆ ಮಾತ್ತವಲ್ಲ ತಹಶೀಲ್ದಾರರ ನೇತೃತ್ವದ ಸಭೆಯಲ್ಲು ಕೊರಗ ಸಮುದಾಯದ ಕುಟುಂಬಗಳು ಈ ವಿಚಾರವನ್ನು ಪದೇಪದೇ ಗಮನಸೆಳೆದರೂ ಅವರ ಸಮಸ್ಯೆ ಪರಿಹಾರ ಒದಗಿಸಲು ಸಮಾಜಕಲ್ಯಾಣ ಇಲಾಖೆಗೆ ಸಾಧ್ಯವಾಗದಿರುವುದು ದುರದೃಷ್ಟಕರವಾಗಿದ್ದು, ಕೊರಗ ಸಮುದಾಯದ ಸಭೆಗಳನ್ನುಇಲಾಖೆ ಕಾಟಾಚಾರಕ್ಕೆ ನಡೆಸುತ್ತಿದೆಯಾ ಎಂಬ ಅನುಮಾನ ಕೊರಗ ಸಮುದಾಯದಲ್ಲಿ ವ್ಯಕ್ತವಾಗತೊಡಗಿದೆ.