
ಇಡಿ ಅಧಿಕಾರಿಗಳ ಸೋಗಿನಲ್ಲಿ ಹಣ ಲೂಟಿ ಪ್ರಕರಣ: ಮನೆಗೆ ಸ್ಪೀಕರ್ ಭೇಟಿ, ಪೊಲೀಸ್ ಅಧಿಕಾರಿಗಳ ಜೊತೆ ಸಮಾಲೋಚನೆ
ಬಂಟ್ವಾಳ: ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಸೋಗಿನಲ್ಲಿ ನಗದು ದೋಚಿರುವ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ನಿವಾಸಿ, ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಅವರ ಮನೆಗೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಬುಧವಾರ ಭೇಟಿ ನೀಡಿದ್ದು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಹಿತ ಪೊಲೀಸ್ ಅಧಿಕಾರಿಗಳ ಹಾಗೂ ಮನೆ ಮಂದಿ ಜೊತೆ ಸಮಾಲೋಚನೆ ನಡೆಸಿ ತನಿಖಾ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್ ಈ ಪ್ರಕರಣದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಆಧುನಿಕ ತಂತ್ರಜ್ಞಾನದೊಂದಿಗೆ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ. ಇದಕ್ಕಗ್ರಾಮಸ್ಥರ ಮತ್ತು ಮನೆಯವರ ಸಹಕಾರ ಅಗತ್ಯವಿದೆ ಎಂದರು.
ಈಗಾಗಲೇ ಡಿವೈಎಸ್ಪಿ ನೇತೃತ್ವದ 4 ತಂಡಗಳನ್ನು ರಚಿಸಲಾಗಿದ್ದು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಶೀಘ್ರವೇ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಪ್ರಕರಣವನ್ನು ಭೇದಿಸಲಿದ್ದಾರೆ ಎಂದರು.
ಜಿಲ್ಲಾ ಎಸ್ಪಿ ಯತೀಶ್ ಎನ್, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್, ಮನೆ ಮಾಲಿಕ ಸುಲೈಮಾನ್ ಹಾಜಿ, ಅವರ ಪುತ್ರ ಮುಹಮ್ಮದ್ ಇಕ್ಬಾಲ್ ಅವರ ಜೊತೆ ಸ್ಪೀಕರ್ ಖಾದರ್ ಸಮಾಲೋಚನೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ವಿಟ್ಲ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಎಚ್.ಇ. ನಾಗರಾಜ್, ಪಿಎಸ್ಸೈ ವಿದ್ಯಾ ಈ ಸಂದರ್ಭ ಜೊತೆಗಿದ್ದರು.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ನಿವಾಸಿ, ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಅವರ ನಾರ್ಶದ ಮನೆಗೆ ಜನವರಿ 3 ರಂದು ಶುಕ್ರವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ತಮಿಳುನಾಡು ನೋಂದಾಯಿತ ಮಾರುತಿ ಎರ್ಟಿಗಾ ಕಾರಿನಲ್ಲಿ ಆಗಮಿಸಿದ ಸುಮಾರು 6 ಮಂದಿಯ ತಂಡ ಇಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡೂವರೆ ಗಂಟೆಗಳ ಕಾಲ ತನಿಖೆಯ ನಾಟಕವಾಡಿ ಮನೆಯಲ್ಲಿದ್ದ ನಗದು ಹಣ ಹಾಗೂ ಮನೆ ಮಂದಿಯ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದರು.
ಬಳಿಕ ದರೋಡೆಕೋರರು ಕೊಂಡು ಹೋಗಿದ್ದ ಮೊಬೈಲ್ ಪೊನ್‌ಗಳು ಮನೆಯಲ್ಲೇ ಮಂಗಳವಾರ ಪತ್ತೆಯಾಗಿದೆ. ಕಾರು ಚಾಲಕ ಇದರ ಈ ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿರುವ ಬಗ್ಗೆ ಪೊಲೀಸರು ತಮ್ಮ ತನಿಖೆಯಲ್ಲಿ ಕಂಡುಕೊಂಡಿದ್ದು, ಈತನಿಗಾಗಿ ಪೊಲೀಸರು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸದ್ಯ 30 ಲಕ್ಷರೂ ದೋಚಲಾಗಿದೆ ಎಂದು ಹೇಳಲಾಗಿದ್ದರೂ ಇದಕ್ಕಿಂತಲು ಹೆಚ್ಚು ಹಣ ದೋಚಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ನಾನಾ ಆಯಾಮಗಳಲ್ಲಿ, ವಿವಿದೆಡೆ ರಸ್ತೆಯಲ್ಲಿರುವ ಸಿಸಿ ಕ್ಯಾಮರಗಳನ್ನು ಪರಿಶೀಲಿಸಿ ಆರೋಪಿಗಳ ಜಾಡು ಹಿಡಿದು ವಿವಿಧ ದಿಕ್ಕಿನತ್ತ ತೆರಳಿದ್ದಾರೆ. ಆರೋಪಿಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ಕಲೆ ಹಾಕಿರುವ ಪೊಲೀಸರು ಈ ಕೃತ್ಯವನ್ನು ಸವಾಲಾಗಿ ಸ್ವೀಕರಿಸಿ, ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ.